ಮಂಡ್ಯ: ಸಕ್ಕರೆ ನಾಡು ಮಂಡ್ಯ ರಾಜಕೀಯ ಚಟುವಟಿಕೆಗಳು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಒಂದು ಕಡೆಗೆ ರಾಜಕೀಯ ನಾಯಕರ ಅಬ್ಬರ ಪ್ರಚಾರ ಶುರುವಾಗಿದ್ದರೆ, ಇನ್ನೊಂದು ಕಡೆ ಅಭ್ಯರ್ಥಿಗಳು ಹೇಗಾದರೂ ಮಾಡಿ ಗೆದ್ದು, ತಮ್ಮ ಕ್ಷೇತ್ರವನ್ನೂ ಉಳಿಸಿಕೊಳ್ಳುವಲ್ಲಿ ತಲ್ಲೀನರಾಗಿದ್ದಾರೆ. ಹೀಗಿರುವಾಗ ಕೆಲವರು ಪಕ್ಷದಿಂದ ಪಕ್ಷಕ್ಕೆ ಹಾರುವ ಯೋಚನೆಯಲ್ಲೂ ತೊಡಗಿದ್ದಾರೆ.
ಸದ್ಯ ಮಾರ್ಚ್ 12ರಂದು ನರೇಂದ್ರ ಮೋದಿ ಅವರು ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗೆ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಹೊತ್ತಿನಲ್ಲಿ ಬಿಜೆಪಿಗೆ ಬಿಗ್ ಶಾಕ್ ಕಾದಿದೆ. ಏನಪ್ಪ ಎಂದರೆ ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ನತ್ತ ಮುಖ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಬೇರು ಬಿಡುವ ಉತ್ಸಾಹದಲ್ಲಿದ್ದ ಬಿಜೆಪಿಗೆ ಮರ್ಮಾಘಾತ ಎದುರಾಗುವ ಸಾಧ್ಯತೆ ಇದೆ.
ಪಕ್ಷಾಂತರದ ಸುಳಿವು ಬಿಟ್ಟುಕೊಟ್ಟ ನಾರಾಯಣಗೌಡ:ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲದ ಬಾವುಟ ಹಾರಿಸಿದ್ದವರೇ ಮತ್ತೆ ಕಾಂಗ್ರೆಸ್‌ನತ್ತ ಮುಖಮಾಡ್ತಾರೆ ಎಂಬ ಅನುಮಾನ ಹುಟ್ಟುಹಾಕಿದೆ. ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಎನ್ನುವ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು ನೀಡಿದ ಉತ್ತರ ಇಂತಹ ಊಹಾಪೋಹಗಳಿಗೆ ಮತ್ತಷ್ಟು ಎಡೆ ಮಾಡಿಕೊಟ್ಟಿದೆ.
ಕಾಂಗ್ರೆಸ್ ನಿಂದ ಆಹ್ವಾನ ಬಂದಿರೋದು ನಿಜ:ಮಂಡ್ಯದ ಕೆ ಆರ್ ಪೇಟೆಯಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ಕಾಂಗ್ರೆಸ್ ನಿಂದ ಆಹ್ವಾನ ಬಂದಿರೋದು ನಿಜ. ಆದ್ರೆ, ಸೇರ್ಪಡೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಆಪ್ತರು ಹಾಗೂ ಹಿತೈಷಿಗಳ ಜೊತೆ ಚರ್ಚಿಸಿ ಅಭಿಪ್ರಾಯ ಕೇಳಬೇಕು. ಅಭಿಪ್ರಾಯ ಕೇಳಿದ ಬಳಿಕ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಕೆ.ಆರ್.ಪೇಟೆ ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದೆ. ಅದಕ್ಕಾಗಿ ಪಕ್ಷಕ್ಕೆ ಬರುವಂತೆ ಒತ್ತಾಯ ಇದೆ ಎಂದು ಸಚಿವರು ಹೇಳಿದ್ದಾರೆ. ಯಾವುದೇ ನಿರ್ಧಾರ ಮಾಡಿದ್ರೂ ಮಾಧ್ಯಮಗಳ ಮೂಲಕವೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರು- ಮೈಸೂರು ಹೈವೇ ಪ್ರಧಾನಿ ಉದ್ಘಾಟನೆ: ಬೆಂಗಳೂರು- ಮೈಸೂರು ನಡುವಿನ ಎಕ್ಸ್‌ಪ್ರೆಸ್ ಹೈವೇಯನ್ನ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 12 ರಂದು ಮಂಡ್ಯದ ಗೆಜ್ಜಲಗೆರೆಯ ಬಳಿ ಉದ್ಘಾಟನೆ ಮಾಡಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಸ್ವಾಗತಿಸಿ ಮಾತನಾಡಿದ ಅವರು, ಮಂಡ್ಯ ಮತ್ತು ಮದ್ದೂರಿನ ಮಧ್ಯದಲ್ಲಿರುವ ಗೆಜ್ಜಲಗೆರೆ ಬಳಿಯ ಹೈವೇ ಮೇಲೆ ಪ್ರಧಾನಿಯ ಚಾಪರ್ ಲ್ಯಾಂಡ್ ಆಗಲಿದ್ದು, ನಂತರ ಅವರು ಬೆಂಗಳೂರು- ಮೈಸೂರು ನಡುವಿನ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಹೈವೇ ಪಕ್ಕದಲ್ಲಿ ಸ್ಥಳವನ್ನು ಗುರುತು ಮಾಡಲಾಗಿದ್ದು, ಅಲ್ಲಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿದೆ. ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಮತ್ತು ಮೈಸೂರು ಜನರನ್ನು ಉದ್ದೇಶಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯ ನಾಯಕರು ಮತ್ತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾಗವಹಿಸಲಿದ್ದಾರೆ. ಹೈವೇ ಮೇಲೆ ಪ್ರಧಾನಿ ಅವರ ಚಾಪರ್ ಲ್ಯಾಂಡ್ ಮಾಡುವ ಬಗ್ಗೆ ಎಸ್ಪಿಜಿಗೆ ಅನುಮತಿ ಕೇಳಿದ್ದೇವೆ ಎಂದರು.
ಎಸ್ಪಿಜಿ ಅನುಮತಿಯನ್ನು ನೀಡದಿದ್ದರೆ ಮಂಡ್ಯದ ಪಿಎಸ್ ಕಾಲೇಜಿನಲ್ಲಿ ಚಾಪರ್ ಲ್ಯಾಂಡ್ ಆಗಲಿದ್ದು, ಪ್ರಧಾನಿ ಮೋದಿ ಮಂಡ್ಯ ನಗರದಲ್ಲಿ ಎರಡು ಕಿ.ಮೀ ರೋಡ್ ಶೋ ನಡೆಸಿ ಅಲ್ಲಿಂದ ಗೆಜ್ಜಲಗೆರೆಗೆ ತಲುಪಲಿದ್ದಾರೆ. ಇನ್ನು ಪ್ರಧಾನಿ ಅದೇ ಕಾರ್ಯಕ್ರಮದಲ್ಲಿ ಮೈಸೂರು - ಕೊಡಗು ಹೈವೇಯ ಭೂಮಿ ಪೂಜೆಯನ್ನೂ ನೆರವೇರಿಸಲಿದ್ದಾರೆ ಎಂದು ಸಂಸದರು ಮಾಹಿತಿ ನೀಡಿದರು.
ಇದನ್ನೂಓದಿ:ಇದೇ ತಿಂಗಳು ಚುನಾವಣಾ ದಿನಾಂಕ ಘೋಷಣೆ ಆಗಬಹುದು: ಹೆಚ್ ಡಿ. ಕುಮಾರಸ್ವಾಮಿ