ಮಂಡ್ಯ: "ಸಿಐಡಿ ವರದಿ ಕೊಡುವವರೆಗೆ ತಾಳ್ಮೆಯಿಂದ ಇರಬೇಕು, ನಾನು ಮಧ್ಯಪ್ರವೇಶ ಮಾಡುವುದಕ್ಕಾಗುತ್ತಾ? ಸಂಪೂರ್ಣ ತನಿಖೆ ಮಾಡಿದ ನಂತರ ವರದಿ ಸಲ್ಲಿಸುವುದಕ್ಕೆ ಸರ್ಕಾರ ಆದೇಶ ಮಾಡಿದೆ" ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು. ಸಿಐಡಿ ತನಿಖೆ ಎದುರಿಸುತ್ತಿರುವ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಅವರು, "ಇದು ನನ್ನ ವಿರುದ್ಧದ ಸಿಐಡಿ ತನಿಖೆಯಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದವರ ವಿರುದ್ಧ ಸಿಐಡಿ ತನಿಖೆ" ಎಂದು ಹೇಳಿದರು.
ಬಿಜೆಪಿಯಿಂದ ಪೇಸಿಎಸ್ ಅಭಿಯಾನ ಮಾಡುತ್ತಿರುವ ಬಗ್ಗೆ ಮಾತನಾಡಿ, ಬಿಜೆಪಿ ಸ್ನೇಹಿತರಿಗೆ ಅಭಿನಂದನೆಗಳು. ವೃತ್ತಿ ಇಲ್ಲದೇ ಈ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ಶುಭ ಹಾರೈಸ್ತೀನಿ ಎಂದರು. ಅವರು, ವಿಪಕ್ಷಗಳು ರಾಜೀನಾಮೆಗೆ ಒತ್ತಾಯಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಪಾಪ ಅವರು ಕೇಳಿದ ಮೇಲೆ ಕೊಡಲೇಬೇಕಲ್ವಾ?. ಅವರೇ ಅಲ್ವಾ ನಮ್ಮ ಮಾಲೀಕರು ಎಂದು ವ್ಯಂಗ್ಯವಾಡಿ, ನನಗೆ ಮಾಲೀಕರು ಜನ ಮತ್ತು ಪಕ್ಷ. ಬಿಜೆಪಿಯವರು ಹೇಳಿದ್ದನ್ನು ಕೇಳುವುದಕ್ಕ ನಾವು ಇರುವುದು ಎಂದರು.
ಬಿಜೆಪಿ ಮತ್ತು ಜೆಡಿಎಸ್ ಇಬ್ಬರಿಗೂ ಚಲುವರಾಯಸ್ವಾಮಿ ಟಾರ್ಗೆಟ್ ಆಗಿದ್ದಾರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರಿಬ್ಬರೂ ಒಟ್ಟಿಗೆ ಸೇರೋದು ನನಗೆ ಸಂತೋಷ ಎಂದರು. ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ಪತ್ರ ನಕಲಿ ಅಂತಾ ಎಲ್ಲರಿಗೂ ಗೊತ್ತು. ಒಂದೇ ಪೆನ್ನಿನಲ್ಲಿ ಒಬ್ಬರೇ ಆರೇಳು ಸಹಿ ಮಾಡಿದ್ದಾರೆ. ತನಿಖೆಯಾಗಲಿ, ಆ ವಿಚಾರ ಇಲ್ಲಿಗೆ ಬಿಡಿ. ಫೇಕ್ ಪತ್ರ ಬರೆದಿರುವವರು ಇವತ್ತಲ್ಲ, ನಾಳೆ ಸಿಕ್ತಾರೆ. ಅವರ ವಿರುದ್ಧ ಕ್ರಮ ಆಗೇ ಆಗುತ್ತೆ ಎಂದು ಹೇಳಿದರು.
ನಾವು ಈ ವರ್ಷ ಅರೆ ಖುಷ್ಕಿ ಬೆಳೆ ಮಾತ್ರ ಬೆಳೆಯಬೇಕು ಎಂದು ರೈತರಿಗೆ ಮನವಿ ಮಾಡಿದ್ದೇವೆ, ರೈತರು ಈ ಬಾರಿ ಯಾವುದೇ ಕಾರಣಕ್ಕೂ ಕಬ್ಬು ಬೆಳೆಯೋಕೆ ಮುಂದಾಗಬೇಡಿ. ಹೊಸ ಬೆಳೆ ಬೆಳೆದರೆ ತೊಂದರೆ ಆಗುತ್ತೆ. ಸಿಎಂ ಜೊತೆ ಈಗಾಗಲೇ ಮಾತನಾಡಿದ್ದೇವೆ. ಕಟ್ಟು ಪದ್ಧತಿಯಲ್ಲಿ ನೀರು ಬಿಡುತ್ತೇವೆ. 15 ದಿನಕ್ಕೊಮ್ಮೆ ನೀರು ಬೀಡುತ್ತೇವೆ. ಈ ರೀತಿ ಮಾಡಿದರೆ 60 ದಿನ ನೀರು ಬಿಡಬಹುದು. ಹೇಮಾವತಿ ಜಲಾಶಯದಿಂದಲೂ ಕಟ್ಟು ಪದ್ಧತಿಯಲ್ಲಿ ನೀರು ಬಿಡುಗಡೆ ಮಾಡುತ್ತೇವೆ ಎಂದರು.
ಬಿಜೆಪಿ-ಜೆಡಿಎಸ್ಗೆ ಲೋಕಸಭಾ ಚುನಾವಣೆ ಭಯ ಶುರುವಾಗಿದೆ: ಮತ್ತೊಂದೆಡೆ, ಬಿಜೆಪಿ-ಜೆಡಿಎಸ್ಗೆ ಲೋಕಸಭಾ ಚುನಾವಣೆ ಭಯ ಶುರುವಾಗಿದೆ. ಹಿಂದಿನ ಸರ್ಕಾರದಲ್ಲಿ ದೊಡ್ಡ ದೊಡ್ಡ ಹಗರಣ ಆಗಿದೆ ತನಿಖೆ ಮಾಡಿ ಬಿಲ್ ಕೊಡ್ತೇವೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ಮಂಡ್ಯದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ನಡೆದ ಮಂಡ್ಯದ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಲುರಾಯಸ್ವಾಮಿ, ಜೆಡಿಎಸ್-ಬಿಜೆಪಿ ಪಾಪ ಅವರಿಗೆ ಏನು ಹೇಳುವುದಕ್ಕಾಗಲ್ಲ. ಗ್ಯಾರಂಟಿ ಕೊಟ್ಟಿದ್ದೇವೆ ಅದಕ್ಕೆ ಅವರು ಮಾತನಾಡುತ್ತಿಲ್ಲ ಎಂದರು.
ಸರ್ಕಾರಿ ನೌಕರರು ಯಾವಾಗ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಾರೋ ಅವಾಗ ಸರ್ಕಾರಕ್ಕೆ ಗೌರವ ಸಿಗುತ್ತೆ. ಜನರಿಗೆ ಕಿರುಕುಳ ಕೊಟ್ಟರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ. ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ ಎಂದು ಸಚಿವ ಚಲುವರಾಯಸ್ವಾಮಿ ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಸ್ವಯಂಕೃತ ಅಪರಾಧದಿಂದ ನನ್ನ ಕಾಲ ಮೇಲೆ ನಾನೇ ಕಲ್ಲು ಹಾಕಿಕೊಂಡಿದ್ದೇನೆ : ವಿ.ಸೋಮಣ್ಣ