ಮಂಡ್ಯ: ಶಿವಮೊಗ್ಗದ ರೀತಿ ಕೆಆರ್‌ಎಸ್ ಡ್ಯಾಮ್ ಗೆ ತೊಂದರೆ ಆದರೆ ಯಾರು ಹೊಣೆ? ಎಂದು ಅಧಿಕಾರಿಗಳ ವಿರುದ್ಧ ಸಚಿವ ಕೆ.ಸಿ.ನಾರಾಯಣಗೌಡ ಕಿಡಿಕಾರಿದರು.
ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಂ ಗೆ ತೊಂದರೆ ಎಂಬ ಮಾತುಗಳು ಕೇಳಿ ಬಂದ ಬಳಿಕ, ಮಂಡ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸಚಿವರು ವಾರ್ನಿಂಗ್ ನೀಡಿದ್ದಾರೆ.
ಗಣಿ ಸಚಿವರ ಜೊತೆ ಅಕ್ರಮ ಗಣಿ ಪ್ರದೇಶಗಳಿಗೆ ಭೇಟಿ ಕೊಟ್ಟು ಎಚ್ಚರಿಕೆ ನೀಡಿ ಬಂದಿದ್ದೇವೆ. ಆದರೂ ಅಕ್ರಮ ಗಣಿ ನಿಂತಿಲ್ಲ, ಮಂಡ್ಯ ಜಿಲ್ಲೆಯಲ್ಲಿ ನೂರಾರು ಲೈಸೆನ್ಸ್ ಇಲ್ಲದ ಕ್ರಷರ್‌ಗಳಿವೆ ಎಂದು ಕಿಡಿಕಾರಿದರು.
ಇನ್ನು ಅಧಿಕಾರಿಗಳು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಾಗಿದ್ದು, ಗಣಿ ಸಚಿವರ ಗಮನಕ್ಕೆ ತಂದು ಅಧಿಕಾರಿಗಳ ವಿರುದ್ಧ ಕ್ರಮ ತೆಗೆಕೊಳ್ಳಬೇಕಾಗುತ್ತದೆ. ಈ ಕೂಡಲೇ ಅಕ್ರಮ ಗಣಿಗಾರಿಕೆ ನಿಲ್ಲಬೇಕು. ಯಾರು ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೋ ಅವರು ಈ ಕೂಡಲೇ ನಿಲ್ಲಿಸಬೇಕು. ಲೈಸೆನ್ಸ್ ಪಡೆದು ಗಣಿಗಾರಿಕೆ ನಡೆಸಲಿ ಎಂದರು.