ಮಂಡ್ಯ: ಜೈ ಶ್ರೀರಾಮ್ ಘೋಷಣೆಗೆ ಪ್ರತ್ಯುತ್ತರವಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ಗೆ ಆಲ್ ಖೈದಾ ಬೆಂಬಲ ನೀಡಿರುವುದು ನಿಜಕ್ಕೂ ಖಂಡನೀಯ. ಇಂತಹ ಸಂಘಟನೆಗಳ ಜೊತೆ ಕೈಜೋಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಭಯೋತ್ಪಾದಕ ಸಂಘಟನೆಗಳು ದೇಶಕ್ಕೆ ಮಾರಕ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಆಲ್ ಖೈದಾದಂತಹ ಸಂಘಟನೆಗಳ ಜೊತೆ ಯಾವುದೇ ಸಮುದಾಯ ಕೈಜೋಡಿಸಬಾರದು. ಸರ್ಕಾರ ಇಂತಹ ನಿಷೇಧಿತ ಸಂಘಟನೆಗಳು ಮತ್ತು ಆ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳುತ್ತದೆ. ಕಾನೂನಿನಲ್ಲಿ ಏನೆಲ್ಲಾ ಅವಕಾಶ ಇದೆಯೋ ಅದನ್ನು ಮಾಡುತ್ತೇವೆ, ಕಾನೂನಿನಲ್ಲಿ ಇಲ್ಲದಿರೋದನ್ನ ಮಾಡಲು ಹೋಗುವುದಿಲ್ಲ ಎಂದರು.
ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಬಿಜೆಪಿ ಕಾರಣ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ಗೊಂದಲದಲ್ಲಿದ್ದಾರೆ. ಪಾಪ ಅವರಿಗೆ ಏನು ಹೇಳಬೇಕು ಅಂತಾನೆ ಗೊತ್ತಾಗಲ್ಲ. ಕಾಂಗ್ರೆಸ್ನವರು ಸಮವಸ್ತ್ರ ವಿಚಾರದ ಕುರಿತು ಯಾವ ರೀತಿ ನಿಲುವು ತೆಗೆದುಕೊಳ್ಳಬೇಕೆಂಬ ಗೊಂದಲದಲ್ಲಿದ್ದಾರೆ ಎಂದರು.
ಪ್ರತಿಯೊಬ್ಬರು ದೇಶದ ಕಾನೂನುಗಳನ್ನ ಗೌರವಿಸಬೇಕು. ಆಜಾನ್, ಹಿಜಾಬ್ ವಿಚಾರಕ್ಕೆ ಸಂಬಂಧಿದಂತೆ ಸಮಾಜದಲ್ಲಿ ಯಾರೂ ಶಾಂತಿ ಕದಡುವ ಕೆಲಸ ಮಾಡಬೇಡಿ, ನಮ್ಮ ನಾಡು ಸೌಹಾರ್ದತೆಯಿಂದ ಕೂಡಿದೆ. ಇದಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದರು.
ಇದನ್ನೂ ಓದಿ: ಮಗಳ ಮೇಲೆ ಅತ್ಯಾಚಾರ: ಅಪರಾಧಿ ತಂದೆಗೆ 20 ವರ್ಷ ಜೈಲು ಶಿಕ್ಷೆ, ದಂಡ