ಮಂಡ್ಯ : ಕೊನೆಗೂ ಮನ್ಮುಲ್ ಹೈಡ್ರಾಮಾಕ್ಕೆ ತೆರೆಬಿತ್ತು. ಅಧ್ಯಕ್ಷ ಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿ ಕೈ ಸಕ್ಸಸ್ ಆಯ್ತು. ರಾಜ್ಯ ಮಟ್ಟದಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಆಗ್ತಿದ್ರೆ, ಮನ್ಮುಲ್ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಕಾಂಗ್ರೆಸ್ಗೆ ಸಪೋರ್ಟ್ ಮಾಡೋ ಮೂಲಕ ಠಕ್ಕರ್ ಕೊಟ್ರು. ಒಂದೆಡೆ ಜೆಡಿಎಸ್ ಇಬ್ಬರು ಸದಸ್ಯರನ್ನ ಅನರ್ಹಗೊಳಿಸಿದ್ದಕ್ಕೆ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಇಷ್ಟಕ್ಕೆಲ್ಲ ಕಾರಣ ಆಗಿದ್ದು ಮನ್ ಮುಲ್ ಎಲೆಕ್ಷನ್.
ಹೌದು, ಇಂದು ನಡೆದ ಮನ್ ಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಜೆಡಿಎಸ್ 7, ಕಾಂಗ್ರೆಸ್ 3, ಬಿಜೆಪಿ 2, ಅಧಿಕಾರಿಗಳು 5, ಒಟ್ಟು 17 ಮತಗಳಿರುವ ಮನ್ ಮುಲ್ ಆಡಳಿತ ಮಂಡಳಿಯಲ್ಲಿ ಕೇವಲ 3 ಸದಸ್ಯರಿರುವ ಕಾಂಗ್ರೆಸ್ ಅಧಿಕಾರವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯ್ತು.
ಗೆಲ್ಲಲು 9 ಮತಗಳು ಬೇಕಾಗಿತ್ತು. ಅದಕ್ಕಾಗಿ 5 ಅಧಿಕಾರಿಗಳು 3 ಕಾಂಗ್ರೆಸ್ ಮತಗಳಿತ್ತು. ಏನಾದರೂ ಮಾಡಿ ಗೆಲ್ಲಲೇಬೇಕು ಎಂದು ಪ್ಲಾನ್ ಮಾಡಿದ ಕಾಂಗ್ರೆಸ್ ಬಿಜೆಪಿಯ ಒಬ್ಬ ಸದಸ್ಯ ಎಸ್.ಪಿ ಸ್ವಾಮಿಯನ್ನ ಸೆಳೆದು 9 ಮತಗಳನ್ನ ಪಡೆದು ಗೆಲುವಿನ ನಗೆ ಬೀರಿತು.
ಜೆಡಿಎಸ್ ಸದಸ್ಯರಿಂದ ಎಆರ್ ಕಚೇರಿಗೆ ಮುತ್ತಿಗೆ: ಈ ಮಧ್ಯೆ ಜೆಡಿಎಸ್‌ನ ರಾಮಚಂದ್ರು ಹಾಗೂ ವಿಶ್ವನಾಥ್ ಅವರನ್ನ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂಬ ಕಾರಣ ನೀಡಿ ಅನರ್ಹಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಜೆಡಿಎಸ್ ಸದಸ್ಯರು ಎಆರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರಲ್ಲದೇ ಕಾಂಗ್ರೆಸ್ ಅಧಿಕಾರ ಹಿಡಿಯಲು ವಾಮ ಮಾರ್ಗ ಅನುಸರಿಸಿ, ನಮಗೆ ಕಾನೂನು ಬಾಹಿರವಾಗಿ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಇದನ್ನೂ ಓದಿ: ಮನ್ಮುಲ್ನಲ್ಲಿ ಮತ್ತೊಂದು ಹಗರಣ: ಆದರೆ ಈ ಬಾರಿ ನೀರಿಗೆ ಹಾಲಲ್ಲ, ರಾಸಾಯನಿಕ ಬೆರೆಸಿದ ದುಷ್ಕರ್ಮಿಗಳು!
ಕಾಂಗ್ರೆಸ್ ಹಾಕಿದ ಗೇಮ್ ಪ್ಲಾನ್ ವರ್ಕೌಟ್: ಒಟ್ಟಾರೆ ಚುನಾವಣೆ ಅಂದ್ಮೇಲೆ ಏನಾದರೊಂದು ಗಿಮಿಕ್ ಇದ್ದೇ ಇರುತ್ತೆ. ಅದೇ ರೀತಿ ಕಾಂಗ್ರೆಸ್ ಹಾಕಿದ ಗೇಮ್ ಪ್ಲಾನ್ ವರ್ಕೌಟ್ ಆಗಿದ್ದು ಮಾತ್ರ ಆಶ್ಚರ್ಯ. ಅದೇನಾದರೂ ಆಗ್ಲೀ, ಬಿಜೆಪಿ ಹಾಗೂ ಜೆಡಿಎಸ್‌ನ ರಾಜ್ಯ ನಾಯಕರು ಕಾಂಗ್ರೆಸ್ ಮೇಲೆ ಕೆಂಡ ಕಾರುತ್ತಿದ್ದಾರೆ.
ಹೊಂದಾಣಿಕೆ ರಾಜಕೀಯಕ್ಕೆ ಬಿಜೆಪಿ ಲೀಡರ್ ವಿರೋಧ: ಆದರೆ ಇಲ್ಲಿ ಬಿಜೆಪಿಯ ಒಬ್ಬ ಸದಸ್ಯ ಸದ್ದಿಲ್ಲದೇ ಕಾಂಗ್ರೆಸ್ಗೆ ಸಪೋರ್ಟ್ ಮಾಡಿದ್ದಂತೂ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ. ಅಲ್ಲದೇ, ಮನ್ ಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸೋ ಮೂಲಕ ರಾಜ್ಯ ಮಟ್ಟದಲ್ಲಿ ನಡಿಯುತ್ತಿರೋ ಬಿಜೆಪಿ-ಜೆಡಿಎಸ್‌ನ ಹೊಂದಾಣಿಕೆ ರಾಜಕೀಯಕ್ಕೆ ಮಂಡ್ಯ ಬಿಜೆಪಿ ಲೀಡರ್ ನೇರವಾಗಿಯೇ ತಮ್ಮ ವಿರೋಧ ವ್ಯಕ್ತಪಡಿಸಿದ್ದಂತೂ ಸುಳ್ಳಲ್ಲ.
ಇದನ್ನೂ ಓದಿ: ಜೆಡಿಎಸ್‌ನ ಇಬ್ಬರು ನಿರ್ದೇಶಕರು ಅನರ್ಹ: ಮನ್ ಮುಲ್ ಚುನಾವಣೆ ಮುಂದೂಡಿಕೆ