ಮಂಡ್ಯ: ಕೊರೊನಾದಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ. ಈ ನಡುವೆ ಇಂತಹ ಪರಿಸ್ಥಿತಿ ಮಾವಿನ ಬೆಳಗಾರರಿಗೆ ಬರದಂತೆ ತಡೆಯಲು ಜಿಲ್ಲಾ ತೋಟಗಾರಿಕಾ ಇಲಾಖೆ ಮತ್ತು ಜಿಲ್ಲಾಡಳಿತ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮಾರ್ಕೆಟಿಂಗ್ ಅತೀ ಹೆಚ್ಚು ಬಳಕೆಯಲ್ಲಿದ್ದು, ಇದನ್ನು ಹೆಚ್ಚಾಗಿ ಖಾಸಗಿ ವಲಯದಲ್ಲಿ ಬಳಕೆ ಮಾಡಲಾಗುತ್ತದೆ. ಈ ವಿಧಾನವನ್ನು ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಅಳವಡಿಸಿಕೊಳ್ಳಲು ನಿರ್ಧರಿಸಿದ್ದು, ಮಾವು ಬೆಳೆಗಾರರ ರಕ್ಷಣೆಗೆ ಮುಂದಾಗಿದೆ.
ಆನ್ಲೈನ್ನಲ್ಲಿ ಸಿಗಲಿದೆ ತಾಜಾ ಮಾವಿನ ಹಣ್ಣು:
ಕೊರೊನಾದಿಂದ ಜಿಲ್ಲೆಯ ತರಕಾರಿ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದು, ಕೆಲವರು ನಷ್ಟ ಅನುಭವಿಸಿ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಆದರೆ, ಮಾವು ಬೆಳೆಗಾರರ ವಿಚಾರದಲ್ಲಿ ಎಚ್ಚೆತ್ತ ಅಧಿಕಾರಿಗಳು ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಆನ್ಲೈನ್ನಲ್ಲಿ ಗ್ರಾಹಕರಿಗೆ ಮಾವಿನ ಹಣ್ಣು ಮಾರಾಟ ಮಾಡಲು ಹೊಸ ವೆಬ್ಸೈಟ್ ತೆರದಿದೆ. ಇದಕ್ಕೆ ಮಾವು ಬೆಳೆಗಾರರು ಕೈ ಜೋಡಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 1,192 ಹೆಕ್ಟೇರ್ ಜಮೀನಿನಲ್ಲಿ ಮಾವು ಬೆಳೆಯಲಾಗಿದ್ದು, 6,742 ಟನ್ ಮಾವು ಉತ್ಪಾದನೆಯಾಗಲಿದೆ. ಕೊರೊನಾದಿಂದ ಮಾವು ಬೆಳೆಗಾರರಿಗೆ ಸಂಕಷ್ಟ ಬರಬಾರದೆಂದು ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಮಾವು ಪ್ರಿಯರು www.dcmandya.car.nic.in ಎಂಬ ವೆಬ್ಸೈಟ್ಗೆ ಹೋಗಿ ಖರೀದಿ ಮಾಡಬಹುದಾಗಿದೆ. ಇಲ್ಲಿ ಯಾವುದೇ ರಾಸಾಯನಿಕ ಮಿಶ್ರವಿಲ್ಲದ, ನೈಸರ್ಗಿಕವಾದ ಹಣ್ಣುಗಳು ದೊರೆಯುತ್ತವೆ. ಅಲ್ಲದೇ ನೇರವಾಗಿ ತೋಟಗಳಿಗೆ ಹೋಗಿ ಹಣ್ಣನ್ನು ಖರೀದಿ ಮಾಡಬಹುದಾಗಿದೆ.