ಮಂಡ್ಯ : ತಹಶೀಲ್ದಾರ್ ಅಮಾನತುಗೊಂಡಿದ್ದಕ್ಕೆ ಹಳೆ ಬೂದನೂರು ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿರುವ ಅಪರೂಪದ ಪ್ರಸಂಗ ವರದಿಯಾಗಿದೆ. ಕರ್ತವ್ಯಲೋಪ, ಲಂಚಕ್ಕೆ ಬೇಡಿಕೆ ಮತ್ತು ದುರ್ನಡತೆ ಆರೋಪದಡಿ ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ ಗಾಳಿ ಎಂಬುವರನ್ನು ಅಮಾನತು ಮಾಡಲಾಗಿದೆ.
ತಹಶೀಲ್ದಾರ್ ಅಮಾನತು ಆಗಿದ್ದಕ್ಕೆ ಡಿಸಿ ಅಶ್ವಥಿ ಅವರಿಗೆ ಮಂಡ್ಯ ತಾಲೂಕಿನ ಹಳೆ ಬೂದನೂರು ಗ್ರಾಮಸ್ಥರು ಜೈಕಾರ ಕೂಗಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಗ್ರಾಮಸ್ಥರು ಸ್ವಂತ ಮನೆಗಾಗಿ ಹಲವು ಬಾರಿ ಹೋರಾಟ ನಡೆಸಿದ್ದಾರೆ. ಆದರೆ, ತಹಶೀಲ್ದಾರ್ ಚಂದ್ರಶೇಖರ್, ನಿವೇಶನ ಹಂಚಿಕೆ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಇದೆ.
ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ ಗ್ರಾಮಸ್ಥರಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದ್ದಾರೆ. ಹಲವು ಬಾರಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನ ಆಗಿರಲಿಲ್ಲ. ನಿವೇಶನ ಕೊಡಿಸುವಲ್ಲಿ ವಿಫಲ, ಕರ್ತವ್ಯ ಲೋಪ ಸೇರಿದಂತೆ 13 ಕಾರಣ ನೀಡಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರಶ್ಮಿ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ಬೂದನೂರು ಗ್ರಾಮಸ್ಥರು ಡಿಸಿ ಅಶ್ವಥಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.