ಮಂಡ್ಯ : ಅಧಿಕಾರಿಗಳ ಎಡವಟ್ಟಿನಿಂದಾಗಿ ಆದಾಯ ಪ್ರಮಾಣಪತ್ರದಲ್ಲಿ ಒಂದು ಸೊನ್ನೆ ಹೆಚ್ಚಾಗಿ ನಮೂದಾದ ಹಿನ್ನೆಲೆ ಬಿಪಿಎಲ್ ಕಾರ್ಡ್ ರದ್ದಾಗಿ ಬಡ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿದೆ.
ಶ್ರೀರಂಗಪಟ್ಟಣದ ಗಂಜಾಂನಲ್ಲಿ ವಾಸವಾಗಿರುವ ಆಟೋಚಾಲಕ ಲೋಕೇಶ್ ಕುಟುಂಬದ ಆದಾಯ ಪ್ರಮಾಣ ಪತ್ರಕ್ಕೆ ಅಧಿಕಾರಿಗಳು ಒಂದು ಸೊನ್ನೆಯನ್ನು ಹೆಚ್ಚಾಗಿ ಸೇರಿಸಿರುವ ಪರಿಣಾಮ ಆ ಕುಟುಂಬ ತಿನ್ನಲು ಅನ್ನವಿಲ್ಲದಂತೆ ಸಂಕಷ್ಟಕ್ಕೆ ಸಿಲುಕಿ ಕಣ್ಣೀರು ಹಾಕುತ್ತಿದ್ದಾರೆ.
ಮಗನ ಸ್ಕಾಲರ್‌ಶಿಪ್ ಸಲುವಾಗಿ ತಾಲೂಕು ಕಚೇರಿಗೆ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಅಧಿಕಾರಿಗಳು ನಿರ್ಲಕ್ಷ್ಯದಿಂದಾಗಿ ಆದಾಯ ಪ್ರಮಾಣ ಪತ್ರದಲ್ಲಿ ಒಂದು ಸೊನ್ನೆಯನ್ನು ನಮೂದಿಸೋ ಮೂಲಕ ಆದಾಯದ ಮೊತ್ತ 2 ಲಕ್ಷ ರೂ. ಮಾಡಿದ್ದಾರೆ. ಇದರಿಂದ ಬಿಪಿಎಲ್ ಹೋಗಿ ಎಪಿಎಲ್ ಕಾರ್ಡ್ ಆಗಿದ್ದು, ಆ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಿದೆ.
ಈ ಕುಟುಂಬ ಕೂಲಿ ಕೆಲಸ ಹಾಗೂ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದೆ. ಬಿಪಿಎಲ್ ಕಾರ್ಡ್ ರದ್ದಾಗಿರುವ ಕಾರಣ ಇವರಿಗೆ ಸರ್ಕಾರದಿಂದ ಸಿಗಬೇಕಿದ್ದ ಅಕ್ಕಿ ಸಿಗುತ್ತಿಲ್ಲ. ಇದಲ್ಲದೇ ಆಯುಷ್ಮಾನ್ ಕಾರ್ಡ್ ಕೂಡ ರದ್ದಾಗಿದೆ. ಇದರಿಂದ ಆಸ್ಪತ್ರೆಯಲ್ಲಿ ಹಣವಿಲ್ಲದೇ ಪರಿತಪಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಲೋಕೇಶ್ ಅಳಲು ತೋಡಿಕೊಂಡಿದ್ದಾರೆ.
ಲೋಕೇಶ್ ಕುಟುಂಬ ತಾಲೂಕು ಕಚೇರಿ ಸಿಬ್ಬಂದಿಗೆ ಬೇಡಿಕೊಂಡ ಬಳಿಕ ಆದಾಯ ಪ್ರಮಾಣ ಪತ್ರ ತಿದ್ದುಪಡಿ ಮಾಡಿಸಿದ್ದಾರೆ. ಆದರೆ, ಪಡಿತರ ಕಾರ್ಡ್ ಮಾತ್ರ ಇನ್ನು ಕುಟುಂಬದ ಕೈ ಸೇರಿಲ್ಲ. ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿದರೆ ಸಚಿವರ ಬಳಿ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಉಡಾಫೆ ಉತ್ತರ ನೀಡ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿ ಕೆಲಸದಿಂದ ಬಡ ಕುಟುಂಬ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನಾದರೂ ಅಧಿಕಾರಿಗಳು ಇಂತಹ ಅಜಾಗರೂಕ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು.