ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಚನ್ನನಕೆರೆ ಹಾಗೂ ಹಂಗರಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳಿಗೆ ಸಂಸದೆ ಸುಮಲತಾ ಅಂಬರೀಶ್ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳಿಗೆ ಭೇಟಿ ನೀಡಿದ ಸುಮಲತಾ ಅಂಬರೀಶ್, ಸುತ್ತಲಿನ ನಿವಾಸಿಗಳ ಅಹವಾಲುಗಳನ್ನು ಆಲಿಸಿದರು.
ಹಂಗರಹಳ್ಳಿ ವ್ಯಾಪ್ತಿಯ ಗಣಿ ಸ್ಥಳಗಳಲ್ಲಿ ರಾತ್ರಿ ವೇಳೆ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ, ಮನೆಗಳು ಬಿರುಕುಬಿಟ್ಟಿವೆ. ಎರಡು ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಯಾರೂ ತಡೆಯುತ್ತಿಲ್ಲ ಎಂದು ಗ್ರಾಮಸ್ಥರು ಸಂಸದರ ಎದುರು ಅಳಲು ತೋಡಿಕೊಂಡರು.
ಹಂಗರಹಳ್ಳಿ ಬಳಿಕ, ಶ್ರೀರಂಗಪಟ್ಟಣ ತಾಲೂಕಿನ ಜನಪ್ರತಿನಿಧಿಗಳು ಮತ್ತು ಅವರ ಬೆಂಬಲಿಗರೇ ನಡೆಸುತ್ತಿರುವ ಚೆನ್ನನಕೆರೆ ಗ್ರಾಮದ ಕಲ್ಲು ಗಣಿ ಪ್ರದೇಶಕ್ಕೆ ಭೇಟಿ ನೀಡಿದರು. ಗಣಿ ಚಟುವಟಿಕೆಯಿಂದ ಸ್ಥಳೀಯರು ಹಿಂಸೆ ಅನುಭವಿಸುತ್ತಿದ್ದಾರೆ. ಹಾಗಾಗಿ, ಅಧಿಕಾರಿಗಳು ಅಕ್ರಮವಾಗಿ ನಡೆಯುತ್ತಿರುವ ಗಣಿ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಗಣಿ ಮಾಲೀಕರಿಗೆ ದಂಡ ವಿಧಿಸಿ, ನಷ್ಟ ಭರಿಸಿಕೊಳ್ಳಬೇಕು ಎಂದು ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.
ಗಣಿ ಚಟುವಟಿಕೆಯಿಂದ ಪ್ರಾಕೃತಿಕ ಸಂಪನ್ಮೂಲ ನಾಶವಾಗುತ್ತಿದೆ. ಸ್ಥಳೀಯರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಷ್ಟಾದರೂ ಗಣಿಗಾರಿಕೆ ಸ್ಥಗಿತಗೊಳಿಸದಿರುವುದು ಸರಿಯಲ್ಲ. ಅಕ್ರಮ ತಡೆಯುವಲ್ಲಿ ವಿಫಲರಾಗಿದ್ದೀರಿ ಎಂದು ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶಾಸಕರ ಬೆಂಬಲಿಗರಿಂದ ವಿರೋಧ : ಹಂಗರಹಳ್ಳಿ ಬಳಿ ಜನಪ್ರತಿನಿಧಿಯೊಬ್ಬರದ್ದು ಎನ್ನಲಾದ ಕಲ್ಲುಗಣಿ ಪ್ರದೇಶಕ್ಕೆ ಬಂದ ಸುಮಲತಾ ಅವರಿಗೆ ಬೆಂಬಲಿಗರಿಂದ ವಿರೋಧ ವ್ಯಕ್ತವಾಯಿತು. ಉದ್ದೇಶ ಪೂರ್ವಕವಾಗಿ ಇಲ್ಲಿಗೆ ಬಂದಿದ್ದೀರಿ, ಅಕ್ರಮವಾಗಿ ಯಾವುದೇ ಚಟುವಟಿಕೆ ನಡೆಸುತ್ತಿಲ್ಲ. ರಾಜಕಾರಣ ಮಾಡುವುದನ್ನು ಬಿಡಿ ಎಂದು ಗಣಿ ಮಾಲೀಕರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲು ಮುಚ್ಚಿ ಅಡ್ಡಿ: ಚನ್ನನಕೆರೆ ಗ್ರಾಮದ ಬಳಿಯ ಗಣಿ ಪ್ರದೇಶದಲ್ಲಿ ಗಣಿ ಸ್ಥಳಕ್ಕೆ ತೆರಳುವ ಮಾರ್ಗವನ್ನು ಕಿಡಿಗೇಡಿಗಳು ಕಲ್ಲು, ಮಣ್ಣಿನಿಂದ ಮುಚ್ಚಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದೆ ಸುಮಲತಾ, ಜಿಲ್ಲೆಯಲ್ಲಿ ವ್ಯಾಪಕವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಅಧಿಕಾರಿಗಳನ್ನು ಬೆದರಿಸಲಾಗುತ್ತಿದೆ. ಗಣಿ ಪ್ರದೇಶಕ್ಕೆ ಯಾರೇ ಬಂದರೂ ಅವರನ್ನು ತಡೆಯಲಾಗುತ್ತಿದೆ ಎಂದರು.
ಪೊಲೀಸ್ ಜೀಪ್ ಹತ್ತಿ ಹೊರಟ ಸಂಸದೆ : ಅಕ್ರಮ ಗಣಿ ಪ್ರದೇಶಕ್ಕೆ ಸುಮಲತಾ ಭೇಟಿ ನೀಡುವ ವಿಷಯ ತಿಳಿದು ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು ಕಾರು ಹೋಗದಂತೆ ಮಾಡಿದ್ದರು. ಇದನ್ನ ಗಮನಿಸಿದ ಸುಮಲತಾ ಅವರು, ಪೊಲೀಸ್ ಜೀಪ್ ಏರಿ ಗಣಿ ಪ್ರದೇಶ ವೀಕ್ಷಣೆ ಮಾಡಿದರು.
ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆಗೆ ಒತ್ತಾಯ : ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ ಎಂದು ಸಂಸದೆ ಸುಮಲತಾ ತಿಳಿಸಿದರು. ಇಲ್ಲಿ ಆಗಿರುವ ಅಕ್ರಮ ಗಣಿಗಾರಿಕೆಗೆ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರನ್ನು ಪ್ರಶ್ನೆ ಮಾಡಬೇಕಿದೆ. ಅವರು ಸರಿಯಾಗಿ ಕೆಲಸ ನಿರ್ವಹಿಸಿ ದಂಡ ವಿಧಿಸಿದ್ದೇ ಆದರೆ, ಸಾವಿರ ಕೋಟಿಯಷ್ಟು ದಂಡವನ್ನು ವಸೂಲಿ ಮಾಡಬಹುದು ಎಂದರು.
ಮಳೆ ನಡುವೆ ಗಣಿಗಾರಿಕೆ ವೀಕ್ಷಣೆ : ಚನ್ನನಕೆರೆ ಗ್ರಾಮದ ಬಳಿಯ ಗಣಿ ಪ್ರದೇಶ ಪರಿಶೀಲನೆ ಬಳಿಕ ಹಂಗರಹಳ್ಳಿ ಬಳಿ ನಡೆಯುತ್ತಿರುವ ಗಣಿ ಪ್ರದೇಶಕ್ಕೆ ಭೇಟಿ ನೀಡುವ ವೇಳೆ ಜೋರು ಮಳೆ ಸುರಿಯಿತು. ಇದರ ನಡುವೆ ಸುಮಲತಾ ಅವರು ತಮ್ಮ ಭೇಟಿ, ಪರಿಶೀಲನೆ ಮುಂದುವರೆಸಿದರು.
ಬೇಬಿ ಬೆಟ್ಟಕ್ಕೆ ರದ್ದು: ಶ್ರೀರಂಗಪಟ್ಟಣ ತಾಲೂಕಿನ ಗಣಿ ಪ್ರದೇಶದ ನಂತರ ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಗಣಿ ಪ್ರದೇಶಕ್ಕೆ ಸುಮಲತಾ ಅವರು ಭೇಟಿ ನೀಡಬೇಕಾಗಿತ್ತು. ಆದರೆ, ತಡವಾದ ಕಾರಣ ಭೇಟಿ ರದ್ದುಗೊಳಿಸಲಾಯಿತು. ಇನ್ನೊಂದು ದಿನ ಬೇಬಿಬೆಟ್ಟ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಲಾಗುವುದು ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ.