ಮಂಡ್ಯ: ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಮೈಕ್ರೋ ಫೈನಾನ್ಸ್ ನೌಕರನೂ ಆಗಿರುವ ಕೊರೊನಾ ಸೋಂಕಿತನ ಟ್ರಾವೆಲ್ ಹಿಸ್ಟರಿ ಕೇಳಿದ ಅಧಿಕಾರಿಗಳ ತಂಡವನ್ನು ಆತನ ಉತ್ತರ ಬೆಚ್ಚಿ ಬೀಳಿಸಿದೆ.
'ನಾನು ಎಲ್ಲೆಲ್ಲಿ ಓಡಾಡಿದ್ದೀನಿ ಅನ್ನೋದು ನನಗೇ ಲೆಕ್ಕ ಇಲ್ಲ ಸರ್' ಅಂತ ಹೇಳಿದ ಸೋಂಕಿತನ ಹೇಳಿಕೆ ಕೇಳಿ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಮದ್ದೂರು ತಾಲೂಕಿನ ಹಳ್ಳಿಯೊಂದರ ಗ್ರಾಮ ಪಂಚಾಯಿತಿ ಸದಸ್ಯನಾಗಿ ಜೊತೆಗೆ ಫೈನಾನ್ಶಿಯರ್ ಕೂಡ ಆಗಿರುವ ಸೋಂಕಿತ ಫೈನಾನ್ಸ್ ಕಲೆಕ್ಷನ್ ಗಾಗಿ ನಿತ್ಯ ಹಲವೆಡೆ ಸಂಚಾರ ಮಾಡಿದ್ದಾನೆ. ಈತ ಮದ್ದೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳು, ಬೆಂಗಳೂರು, ರಾಮನಗರ, ಮಂಡ್ಯದಲ್ಲೂ ಸಂಚರಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸಾಮೂಹಿಕ ಪರೀಕ್ಷೆ:
ಇತ್ತ ಸಂಚಾರಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಬಂದ ಹಿನ್ನೆಲೆ ಮದ್ದೂರು ಪಟ್ಟಣದ ಎಲ್ಲ ಪೊಲೀಸ್ ಸಿಬ್ಬಂದಿಗೂ ಸಾಮೂಹಿಕವಾಗಿ ಕೋವಿಡ್ 19 ಟೆಸ್ಟ್ ಮಾಡಲಾಗುತ್ತಿದೆ. ಈ ಸಂಬಂಧ ತಾಲೂಕು ಆಸ್ಪತ್ರೆಯಲ್ಲಿ ಎಲ್ಲ ಸಿಬ್ಬಂದಿಯ ಗಂಟಲು ದ್ರವ ಸಂಗ್ರಹ ಮಾಡಲಾಗುತ್ತಿದೆ.
ಇನ್ನೂ ಮಾಜಿ ಸಚಿವರ ಮನೆಯ ಹಿಂಭಾಗದ ನಿವಾಸಿಗೂ ಕೊರೊನಾ ತಗುಲಿದ್ದು, ಜನರಲ್ಲಿ ಆತಂಕ ಶುರುವಾಗಿದೆ. ಸೋಂಕಿತ ಬುಕ್ ಸ್ಟೋರ್ ಮಾಲೀಕನಾಗಿದ್ದು, ಹಲವು ಮಂದಿ ಜೆರಾಕ್ಸ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಖರೀದಿ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.