ಮಂಡ್ಯ: ಜಿಲ್ಲೆಯಲ್ಲಿಯೂ ಸಹ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ದು ನಿಯಂತ್ರಣ ಮಾಡುವ ಹಿನ್ನೆಲೆ ಸಚಿವ ನಾರಾಯಣಗೌಡ ಅಧಿಕಾರಿಗಳ ಜತೆ ಮೇಲಿಂದ ಮೇಲೆ ಸಭೆ ನಡೆಸುತ್ತಿದ್ದಾರೆ. ಈ ನಡುವೆ ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದು, ಅದಕ್ಕಾಗಿ ನಿರ್ಮಲಾನಂದನಾಥ ಶ್ರೀಗಳ ಮೊರೆ ಹೋಗಿದ್ದಾರೆ.
ಒಂದೆಡೆ ಸೋಂಕು ಹೆಚ್ಚಳವಾಗುತ್ತಿದ್ದರೆ ಮತ್ತೊಂದೆಡೆ ಬೆಡ್ ಹಾಗೂ ಆಕ್ಸಿಜನ್ ಕೊರತೆ ಎದ್ದು ಕಾಣಿಸುತ್ತಿದೆ. ಇತ್ತ ಮೃತರ ಸಂಖ್ಯೆಯಲ್ಲಿಯೂ ಸಹ ಕೈಮೀರುತ್ತಿದೆ. ಈ ಹಿನ್ನೆಲೆ ಸಚಿವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇದರ ನಿಯಂತ್ರಣಕ್ಕೆ ಪ್ರಯತ್ನ ನಡೆಸಿದ್ದಾರೆ.
ಇನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆಯಂತೆ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿರುವ ನಾರಾಯಣಗೌಡ ನಿತ್ಯ ಅಧಿಕಾರಿಗಳೊಂದಿಗೆ ಸಾಲು ಸಾಲು ಸಭೆ ನಡೆಸುವ ಜೊತೆಗೆ ಕೋವಿಡ್ ಸೆಂಟರ್ ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದಾರೆ.
ಬಹುತೇಕ ಜೆಡಿಎಸ್ ಶಾಸಕರ ಜೊತೆ ಹೊಂದಾಣಿಕೆ ಕಂಡು ಬರದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷ ನಿರ್ಮಾಲಾನಂದ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸಿ ಅವರ ವಿಶ್ವಾಸ ತೆಗೆದುಕೊಳ್ಳಲು ನಾರಾಯಣಗೌಡ ಪ್ಲಾನ್ ಮಾಡಿಕೊಂಡಿದ್ದಾರೆ.