ಮಂಡ್ಯ: ಜಿಲ್ಲೆಯಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಡಿಸಿ ಇದೀಗ ಅಖಾಡಕ್ಕೆ ಧುಮುಕಿದ್ದು, ಅಂಗಡಿಗಳ ಪರಿಶೀಲನೆ ಮಾಡುತ್ತಿದ್ದಾರೆ. ಇಂದು ಮದ್ದೂರು ಪಟ್ಟಣದ ಹಲವು ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಕವರ್ ಗಳ ಪರಿಶೀಲನೆ ಮಾಡಿ ಮಾಲೀಕರಿಗೆ ಎಚ್ಚರಿಸಿದ್ದಾರೆ.
ಮದ್ದೂರು ಪಟ್ಟಣಕ್ಕೆ ಭೇಟಿ ನೀಡುತ್ತಿದ್ದಂತೆ ಮಾರುಕಟ್ಟೆ ರಸ್ತೆ ಸೇರಿದಂತೆ ಹಲವು ಮಾರ್ಗಗಳಲ್ಲಿ ಸಿಗುವ ಅಂಗಡಿಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ಮಾಡಿದರು.ಜೊತೆಗೆ ಪುರಸಭೆ ವತಿಯಿಂದ ಎಚ್ಚರಿಕೆಯ ಕರಪತ್ರಗಳನ್ನು ಗೋಡೆಗಳಿಗೆ ಅಂಟಿಸಿ ಮಾಲೀಕರಿಗೆ ಪ್ಲಾಸ್ಟಿಕ್ ಕವರ್ ನೀಡದಂತೆ ಎಚ್ಚರಿಕೆ ನೀಡಿದರು.
ಸುಮಾರು 2 ಗಂಟೆಗಳ ಕಾಲ ತಪಾಸಣೆ ನಡೆಸಿದ ಅವರು, ಸರ್ಕಾರ ನಿಷೇಧ ಮಾಡಿರುವುದರಿಂದ ಪ್ಲಾಸ್ಟಿಕ್ ಕವರ್ ಮಾರದಂತೆ ಎಚ್ಚರಿಸಿದ್ದಲ್ಲದೇ, ಜೊತೆಗೆ ಪುರಸಭೆ ವತಿಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.