ಮಂಡ್ಯ: ಕೆ.ಆರ್.ಪೇಟೆಯ ಸಂತೆಬಾಚಹಳ್ಳಿ ಹೋಬಳಿಯ ಸಿಂಗಾಪುರ ಗ್ರಾಮದಲ್ಲಿ ತೆರೆದ ಬಾವಿಗೆ ಆಯತಪ್ಪಿ ಬಿದ್ದು ರೈತ ದಂಪತಿ ಸಾವನ್ನಪ್ಪಿದ್ದಾರೆ.
ಸಿಂಗಾಪುರ ಗ್ರಾಮದ ರೈತ ಶಂಕರ್ ಮೂರ್ತಿ (38), ಅವರ ಪತ್ನಿ ವಸಂತ ಕುಮಾರಿ (31) ಮೃತ ದಂಪತಿ. ಗುರುವಾರ ರಾತ್ರಿ ತಮ್ಮ ಜಮೀನಿನಲ್ಲಿ ಕೊಳವೆ ಬಾವಿಯಿಂದ ತೆಂಗಿನ ಗಿಡಗಳಿಗೆ ಮತ್ತು ಜೋಳಕ್ಕೆ ನೀರು ಹಾಯಿಸಲು ತೆರಳುವಾಗ ಜಮೀನಿನ ಬಳಿ ಕಾಲು ಜಾರಿ ವಸಂತಕುಮಾರಿ ತೆರದ ಬಾವಿಗೆ ಬಿದ್ದಿದ್ದಾರೆ. ಬಳಿಕ ಪತಿ ಶಂಕರಮೂರ್ತಿಯು ಪತ್ನಿಯನ್ನು ಕಾಪಾಡಲು ಬಾವಿಗೆ ಇಳಿದಿದ್ದಾರೆ. ಆದ್ರೆ ಇಬ್ಬರಿಗೂ ಈಜು ಬರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಕ್ಕ ಪಕ್ಕದ ಜಮೀನಿನಲ್ಲಿ ರಾತ್ರಿ ವೇಳೆ ನೀರು ಹಾಯಿಸುತ್ತಿದ್ದ ರೈತರು ಬಾವಿಗೆ ಬಿದ್ದ ಶಬ್ದ ಕೇಳುತ್ತಿದ್ದಂತೆ ಬಂದು ನೋಡಿ, ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ. ಆದರೆ ರಾತ್ರಿ ವೇಳೆಯಾದ್ದರಿಂದ ಅಗ್ನಿಶಾಮಕ ದಳ ಕರೆಯಿಸಿ ಶವಗಳನ್ನು ಮೇಲೆತ್ತಿದ್ದಾರೆ.
ದಂಪತಿಗೆ 12 ವರ್ಷದ ಗಂಡು ಮಗು ಮತ್ತು 10 ವರ್ಷದ ಹೆಣ್ಣು ಮಗುವಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ಸರ್ಕಾರಿ ವಸತಿ ನಿಲಯಕ್ಕೆ ಸ್ವಂತ ಖರ್ಚಿನಲ್ಲಿ ಸುಂದರ ಸ್ಪರ್ಶ ನೀಡಿದ ವಾರ್ಡನ್..)