ಮಂಡ್ಯ: ಬಿಜೆಪಿ ಹೈಕಮಾಂಡ್ ವಿಧಾನಸಭಾ ಚುನಾವಣೆಯ 189 ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಮಂಡ್ಯ ಕ್ಷೇತ್ರದ ಏಳು ಅಭ್ಯರ್ಥಿಗಳ ಹೆಸರನ್ನು ಪಕ್ಷ ಘೋಷಣೆ ಮಾಡಿದೆ. ಮಳವಳ್ಳಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಮುನಿರಾಜು ಅವರನ್ನು ಘೋಷಣೆ ಮಾಡಿದರೇ, ಮದ್ದೂರು ಕ್ಷೇತ್ರಕ್ಕೆ ಎಸ್.ಪಿ. ಸ್ವಾಮಿ, ಮಂಡ್ಯ ಕ್ಷೇತ್ರಕ್ಕೆ ಅಶೋಕ್ ಜಯರಾಂ, ಮೇಲುಕೋಟೆ ಕ್ಷೇತ್ರಕ್ಕೆ ಡಾ.ಇಂದ್ರೇಶ್, ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಸಚ್ಚಿದಾನಂದ, ಕೆ.ಆರ್.ಪೇಟೆ ಕ್ಷೇತ್ರಕ್ಕೆ ಕೆ.ಸಿ.ನಾರಾಯಣ್ ಗೌಡ, ನಾಗಮಂಗಲ ಕ್ಷೇತ್ರಕ್ಕೆ ಸುಧಾ ಶಿವರಾಮೇಗೌಡರಿಗೆ ಟೀಕೇಟ್ ನೀಡಿದೆ. ಪತ್ನಿಗೆ ನಾಗಮಂಗಲ ಕ್ಷೇತ್ರದಿಂದ ಟಿಕೆಟ್ ಕೊಡಿಸುವಲ್ಲಿ ಮಾಜಿ ಸಂಸದ ಶಿವರಾಮೇ ಗೌಡ ಯಶಸ್ವಿಯಾಗಿದ್ದು, ಅವರಿಗೆ ಟಿಕೆಟ್ ಕೈ ತಪ್ಪಿದೆ.
ಕಾಂಗ್ರೆಸ್ ಅಭ್ಯರ್ಥಿಗಳು ಪಟ್ಟಿ: ಇನ್ನು ಕಾಂಗ್ರೆಸ್ ಕೂಡ ಮಂಡ್ಯ ಜಿಲ್ಲೆಯ ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ಘೋಷಣೆ ಮಾಡಿದೆ. ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಘೋಷಣೆ ಮಾಡಿದೆ. ಅದರಲ್ಲಿ ಮಂಡ್ಯ, ಮೇಲುಕೋಟೆ, ಕೆ.ಆರ್ ಪೇಟೆ, ನಾಗಮಂಗಲ, ಮಳವಳ್ಳಿ, ಶ್ರೀರಂಗಪಟ್ಟಣ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ ಮದ್ದೂರು ಕ್ಷೇತ್ರಕ್ಕೆ ಮಾತ್ರ ಯಾರ ಹೆಸರನ್ನು ಸೂಚಿಸದೇ ಇರುವುದು ಕುತೂಹಲ ಮೂಡಿಸಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಗಣಿಗ ಪಿ. ರವಿಕುಮಾರ್ ಅವರಿಗೆ ಟಿಕೆಟ್ ನೀಡಿದರೇ, ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬಿ.ಎಲ್. ದೇವರಾಜು, ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ, ಮಳವಳ್ಳಿ ಎಸ್ಸಿ ಮೀಸಲು ಕ್ಷೇತ್ರಕ್ಕೆ, ಪಿ ಎಂ ನರೇಂದ್ರಸ್ವಾಮಿ, ನಾಗಂಮಲಕ್ಕೆ ಎನ್ ಚೆಲುವರಾಯಸ್ವಾಮಿ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ರಮೇಶ್ ಬಂಡಿ ಸಿದ್ದೇಗೌಡರ ಹೆಸರನ್ನು ಘೋಷಣೆ ಮಾಡಿದೆ. ಆದರೇ ಮದ್ದೂರು ಕ್ಷೇತ್ರಕ್ಕೆ ಮಾತ್ರ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಆಕಾಂಕ್ಷಿಗಳಾದ ಗುರುಚರಣ್ ಹಾಗೂ ಕದಲೂರು ಉದಯ್ ಮಧ್ಯೆ ತೀವ್ರ ಪೈಪೋಟಿ ಇದ್ದು, ಪಕ್ಷ ಯಾರಿಗೆ ಮಣೆ ಹಾಕುತ್ತೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡ, ಉಡುಪಿಯಲ್ಲಿ ಹಾಲಿ ಐವರು ಶಾಸಕರಿಗೆ ಬಿಜೆಪಿ ಕೊಕ್.. ಹೊಸ ಪ್ರಯೋಗಕ್ಕೆ ಕಾರಣ ಏನು?
ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಒಟ್ಟು 16 ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ ಕಳೆದ ಚುನಾವಣೆಯಲ್ಲಿ ಸೋತಿದ್ದ ಗಣಿಗ ರವಿಕುಮಾರ್ ಅವರಿಗೆ ಕಾಂಗ್ರೆಸ್ ಮಣೆ ಹಾಕುವ ಮೂಲಕ ಮತ್ತೊಂದು ಅವಕಾಶ ನೀಡಿದೆ. ಇನ್ನು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ವಿಜಯ್ ರಾಮೇಗೌಡ ಅವರ ಬದಲಿಗೆ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಾಳಯ ಸೇರಿದ್ದ ಬಿ.ಎಲ್. ದೇವರಾಜುಗೆ ಟಿಕೆಟ್ ನೀಡಿ ಅನುಕಂಪದ ಲಾಭ ಪಡೆಯಲು ಮುಂದಾಗಿದೆ. ಟಿಕೆಟ್ ಕೈ ತಪ್ಪಿದ್ದರಿಂದ ವಿಜಯ ರಾಮೇಗೌಡರಿಗೆ ನಿರಾಸೆಯಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ: ಮಂಡ್ಯ ಕೆಆರ್ ಪೇಟೆ ಅಭ್ಯರ್ಥಿಗಳ ಘೋಷಣೆ, ರೈತ ಸಂಘಕ್ಕೆ ಕಾಂಗ್ರೆಸ್ ಬೆಂಬಲ