ಮಂಡ್ಯ: ಸಿಬ್ಬಂದಿ ಕೊರತೆಯಿಂದಾಗಿ ಪತ್ರಕರ್ತರು ಮತ್ತು ರೋಗಿಗಳ ಸಂಬಂಧಿಕರೇ ಸ್ಟ್ರೆಚರ್ ಎಳೆದುಕೊಂಡು ಹೋದ ಘಟನೆ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
ಖಾಸಗಿ ವಾಹಿನಿಯೊಂದರ ಪತ್ರಕರ್ತನೊಬ್ಬ ಅಪಘಾತದಲ್ಲಿ ಗಾಯಗೊಂಡು ಮಿಮ್ಸ್‌ಗೆ ದಾಖಲಾಗಿದ್ದು, ಗಾಯಾಳುವನ್ನು ಸ್ಟ್ರೆಚರ್‌ನಲ್ಲಿ ಕರೆದುಕೊಂಡು ಹೋಗಲು ಸಿಬ್ಬಂದಿ ಇಲ್ಲದೇ ಪತ್ರಕರ್ತರೇ ಎಳೆಯಬೇಕಾಯಿತು.
ಸುದ್ದಿ ಸಂಗ್ರಹಕ್ಕೆ ತೆರಳುತ್ತಿದ್ದ ಖಾಸಗಿ ವಾಹಿನಿ ವರದಿಗಾರ ರಾಘವೇಂದ್ರ ಗಂಜಾಂ ಹಾಗೂ ಛಾಯಾಗ್ರಾಹಕ ಮಧುಸೂದನ್ ಅಪಘಾತದಿಂದ ಗಾಯಗೊಂಡಿದ್ದರು. ಗಾಯಾಳುಗಳಿಗೆ ಚಿಕಿತ್ಸೆಗಾಗಿ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಲಾಗಿತ್ತು. ವೈದ್ಯರು ಸಿಟಿ ಸ್ಕ್ಯಾನ್‌ಗೆ ಶಿಫಾರಸು ಮಾಡಿದ ಹಿನ್ನೆಲೆ ಸ್ಕ್ಯಾನ್ ಸೆಂಟರ್‌ಗೆ ವರದಿಗಾರರನನ್ನು ಕರೆದುಕೊಂಡು ಹೋಗಲು ಸಿಬ್ಬಂದಿ ಇಲ್ಲದೇ ಪತ್ರಕರ್ತರೇ ಸ್ಟ್ರೆಚರ್‌ನಲ್ಲಿ ಎಳೆದುಕೊಂಡು ಹೋಗಬೇಕಾಯಿತು.
ಸದ್ಯ ರಾಘವೇಂದ್ರ ಅವರ ಎಡಗಾಲಿಗೆ ಪೆಟ್ಟಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದಾಖಲಾತಿ ವೇಳೆ ವೈದ್ಯರ ಕೊರತೆಯೂ ಕಂಡು ಬಂದಿತ್ತು. ದಾಖಲಾದ 10 ನಿಮಿಷದ ನಂತರ ವೈದ್ಯರ ತಂಡ ಚಿಕಿತ್ಸೆ ನೀಡಲು ಮುಂದಾಯಿತು ಎನ್ನಲಾಗಿದೆ.
ಸಾಮಾನ್ಯ ರೋಗಿಗಳಿಗೂ ಅವರ ಸಂಬಂಧಿಕರೇ ಸ್ಟ್ರೆಚರ್‌ನಲ್ಲಿ ಎಳೆದುಕೊಂಡು ಹೋಗಬೇಕಾಗಿರುವ ವಾತಾವರಣ ಆಸ್ಪತ್ರೆಯಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಸಿಬ್ಬಂದಿ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವರು ಈ ಕಡೆ ಗಮನ ಹರಿಸಬೇಕಾಗಿದೆ.