ಚಿಕ್ಕಮಗಳೂರು: ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆಯ ಜೊತೆಗೆ ರಾಜಕೀಯ ತಂತ್ರಗಾರಿಕೆಯನ್ನೂ ಆರಂಭಿಸಿದೆ. ಈ ಮಧ್ಯೆ, "ಜೆಡಿಎಸ್ಗೆ ನಾಲ್ಕು ಅಥವಾ ಐದು ಕ್ಷೇತ್ರಗಳು ಫಿಕ್ಸ್. ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಆದರೆ ಮಂಡ್ಯ ಮತ್ತು ಹಳೆ ಮೈಸೂರು ಭಾಗದ ನಾಯಕರು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸೋತವರು ಹೆಚ್.ಡಿ.ಕುಮಾರಸ್ವಾಮಿ ಜೊತೆ ಮಾತನಾಡಿ ಒತ್ತಡ ಹಾಕುತ್ತಿದ್ದಾರೆ" ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.
ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ನಲ್ಲಿ ಬುಧವಾರ, ಕುಮಾರಸ್ವಾಮಿ ಮತ್ತು ಹಳೆ ಮೈಸೂರು ಭಾಗದ ನಾಯಕರ ಸಭೆಯ ಬಗ್ಗೆ ಹೆಚ್ಡಿಕೆ ಆಪ್ತರಾದ ಭೋಜೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. "ನಮಗೆ ಮಂಡ್ಯದಲ್ಲಿ ಜನಬೆಂಬಲವಿದೆ. ಸಂಕ್ರಾಂತಿ ನಂತರ ಹಿಸಿ ಸುದ್ದಿ ನೀಡುತ್ತಾರೆ" ಎಂದು ಹೇಳಿದರು.
"ಮಂಡ್ಯ-ಮೈಸೂರು ಕ್ಷೇತ್ರದ ಟಿಕೆಟ್ ಸಂಬಂಧ ನಾಯಕರ ಜೊತೆ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಗೆ ಮಂಡ್ಯ ಹಾಗೂ ಮೈಸೂರು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟು ಕೊಡಬೇಕೋ ಅಥವಾ ಜೆಡಿಎಸ್ ತೆಕ್ಕೆಗೆ ಬಿಟ್ಟುಕೊಡುವಂತೆ ಬಿಜೆಪಿಗೆ ದಂಬಾಲು ಬೀಳಬೇಕೋ ಎನ್ನುವ ಕುರಿತು ಚರ್ಚೆ ಮಾಡಲು ಸಭೆ ಮಾಡಿದ್ದಾರೆ" ಎಂದು ಮಾಹಿತಿ ನೀಡಿದರು.
"ಮಂಡ್ಯ ಜೆಡಿಎಸ್ನ ಭದ್ರಕೋಟೆ. ನಿಖಿಲ್ ಕುಮಾರಸ್ವಾಮಿ ಅವರು ಪುಟ್ಟರಾಜುವಿಗಿಂತ 60 ಸಾವಿರ ಹೆಚ್ಚು ಮತ ಗಳಿಸಿದ್ದರು. ಮಂಡ್ಯದಲ್ಲಿ ನಮಗೆ ಬೇಸ್ ಇಲ್ಲದೇ ಇದ್ದಿದ್ದರೆ ಅಷ್ಟು ಮತಗಳು ಬರುತ್ತಿತ್ತಾ" ಎಂದು ಕುಮಾರಸ್ವಾಮಿ ಅವರ ಜೊತೆಗೆ ಸಭೆ ನಡೆಸಿದ ಎಸ್.ಎಲ್.ಭೋಜೇಗೌಡ ಪ್ರಶ್ನಿಸಿದರು.
"ನಮಗೆ 4 ರಿಂದ 5 ಸೀಟ್ಗಳು ಸಿಗಬಹುದು. ಆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರಾಗಬೇಕು ಎನ್ನುವ ಬಗ್ಗೆ ಪ್ರತಿದಿನ ಚರ್ಚೆಗಳು ನಡೆಯುತ್ತಿವೆ. ಇದರ ಜೊತೆಗೆ ನಮ್ಮ ಶಕ್ತಿಯನ್ನೂ ಬಿಜೆಪಿಗೆ ಧಾರೆ ಎರೆಯಲು ಚರ್ಚೆಯಾಗುತ್ತಿದೆ. ಕಾರ್ಯಕರ್ತರು ಒಂದಾಗಬೇಕು ಎನ್ನುವುದು ಕುಮಾರಸ್ವಾಮಿ ಆಶಯ. ಕಾರ್ಯಕರ್ತರು ಒಂದಾದರೆ ನಮಗೆ ಒಳ್ಳೆಯ ಫಲಿತಾಂಶ ಬರಲಿದೆ" ಎಂದು ಹೇಳಿದರು.
"ಈಗ ನಾವು ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದೇವೆ. ಸೀಟು ಹಂಚಿಕೆ ತಡವಾಗಬಾರದು, ಬೇಗ ಮುಗಿಸಬೇಕು. ಈ ಲೋಕಸಭಾ ಚುನಾವಣೆ ಭಾರಿ ಮಹತ್ವ ಪಡೆದಿದ್ದು, ನಾಳೆ, ಎರಡು ದಿನಗಳಿಂದ ನಡೆದ ರೆಸಾರ್ಟ್ ರಾಜಕೀಯದ ಬಗ್ಗೆ ಕುಮಾರಸ್ವಾಮಿ ಏನು ಪ್ರತಿಕ್ರಿಯೆ ನೀಡುತ್ತಾರೆ. ನಂತರದಲ್ಲಿ ಏನೆಲ್ಲಾ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ" ಎಂದರು.
ಇದನ್ನೂ ಓದಿ: ಜೆಡಿಎಸ್ ಲೋಕಸಭಾ ಚುನಾವಣೆ ಪೂರ್ವಸಿದ್ಧತಾ ಸಭೆ: ಎಲ್ಲಾ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲ್ಲಿಸಲು ಚರ್ಚೆ