ಮಂಡ್ಯ: ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕ್ಷಣ ಕ್ಷಣಕ್ಕೂ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.
ನಿನ್ನೆ ಒಂದೇ ರಾತ್ರಿ 15 ಅಡಿ ನೀರು ಹೆಚ್ಚಾಗಿದ್ದು, ಈಗ ಪ್ರತಿ ಗಂಟೆಗೊಮ್ಮೆ ಒಂದು ಅಡಿ ನೀರು ಹೆಚ್ಚುತ್ತಿದೆ. ಒಳ ಹರಿವಿನ ಪ್ರಮಾಣ 1.20 ಲಕ್ಷ ಕ್ಯೂಸೆಕ್ ಇದ್ದು, ಕ್ರೆಸ್ಟ್ ಗೇಟ್ ಮೂಲಕ ನದಿಗೆ 25 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿಸಲಾಗಿದೆ.
ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಕೆಆರ್‌ಎಸ್‌ನ ಬೃಂದಾವನ ಸೇರಿದಂತೆ ಎಡಮುರಿ, ಬಲಮುರಿ, ರಂಗನತಿಟ್ಟು ಪಕ್ಷಿಧಾಮ, ಸಂಗಮ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರುವ ಸಾಧ್ಯತೆ ಇದೆ. ಈಗಾಗಲೇ ಕೆಲವು ಪ್ರವಾಸಿ ಕೇಂದ್ರಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಕಾವೇರಿ ನದಿಗೆ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ ಇದೆ.
ನದಿ ಜೊತೆಗೆ ನಾಲೆಗಳಿಗೂ ನೀರು ಬಿಡಲಾಗುತ್ತಿದ್ದು,ಕೆರೆ-ಕಟ್ಟೆಗಳನ್ನು ತುಂಬಿಸಲು ಇಲಾಖೆ ಮುಂದಾಗಿದೆ. ಈ ಹಿನ್ನೆಲೆ ಶ್ರೀರಂಗಪಟ್ಟಣ ತಾಲೂಕು ಆಡಳಿತ ನದಿಪಾತ್ರದ ಗ್ರಾಮಸ್ಥರಿಗೆ ಎಚ್ಚರದಿಂದ ಇರಲು ಸೂಚಿಸಿದೆ.