ಮಂಡ್ಯ: ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ವೋಟಿಗಾಗಿ ನಿನ್ನೆ ರಾತ್ರಿ ಹಂಚಿಕೆ ಮಾಡಿದ್ದಾರೆ ಎನ್ನಲಾದ ಸೀರೆ, ಕೋಳಿಗಳನ್ನು ನೂರಾರು ಮಹಿಳೆಯರು ಹಂಚಿಕೆ ಮಾಡಿದವರ ಬೆಂಬಲಿಗರ ಮನೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿರುವ ಪ್ರಸಂಗ ಇಂದು ನಡೆದಿದೆ.
ಕೆ. ಆರ್. ಪೇಟೆ ಅಭ್ಯರ್ಥಿಯ ಬೆಂಬಲಿಗರು ನಿನ್ನೆ ರಾತ್ರಿ ಮನೆಗೊಂದು ಸೀರೆ ಮತ್ತು ಕೋಳಿ ಹಂಚಿಕೆ ಮಾಡಿದ್ದರು ಎನ್ನಲಾಗ್ತಿದೆ. ನಮಗೆ ಕೋಳಿ ಮತ್ತು ಸೀರೆ ಬೇಡ ಎಂದು ಮಹಿಳೆಯರು ತಿಳಿಸಿದ್ದರೂ, ಮನೆಯ ಕಿಟಕಿ ಮತ್ತು ಬಾಗಿಲ ಬಳಿ ಬಂದು ಚೆಲ್ಲಿ ಹೋಗಿದ್ದರು. ಬಿಜೆಪಿ ಬೆಂಬಲಿಗ ಎನ್ನಲಾದ ರವಿ, ಕುಮಾರಸ್ವಾಮಿ, ವಿಜಯ್ ಕುಮಾರ್ ಎಂಬುವರು ಹಂಚಿಕೆ ಮಾಡಿದ್ದರು ಎಂದು ಮಹಿಳೆಯರು ಆರೋಪಿಸಿದ್ದಾರೆ.
ಬಿಜೆಪಿ ಬೆಂಬಲಿಗರು ಗ್ರಾಮದ ಪರಿಶಿಷ್ಟ ಜಾತಿ ಮತ್ತು ಕುರುಬ ಸಮಾಜದ ಮತದಾರರಿಗೆ ಹಂಚಿಕೆ ಮಾಡಿದ್ದರು. ನಾವು ಮತಗಳನ್ನು ಮಾರಿಕೊಳ್ಳುವುದಿಲ್ಲ, ಸ್ವಾಭಿಮಾನಕ್ಕೋಸ್ಕರ ಪ್ರಜಾಪ್ರಭುತ್ವದ ಉಳಿವಿಗಾಗಿ ಮತ ನೀಡುತ್ತೇವೆ ಎಂದು ನೂರಾರು ಜನ ಮಹಿಳೆಯರು ಸೀರೆ, ಕೋಳಿ ವಾಪಸ್ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿ:ಹುಬ್ಬಳ್ಳಿಯಲ್ಲಿ 400ಕ್ಕೂ ಅಧಿಕ ಮತದಾರರ ಹೆಸರು ಡಿಲೀಟ್: ಮತಗಟ್ಟೆಗೆ ಬಂದವರಿಗೆ ಕಾದಿತ್ತು ಬಿಗ್ ಶಾಕ್
ಪ್ರತಿಯೊಬ್ಬರು ಮತದಾನ ಮಾಡಬೇಕು- ಸಂಸದೆ ಸುಮಲತಾ: ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಬೇಕು. ಒಳ್ಳೆಯ ಸಮಾಜ ನಿರ್ಮಾಣಕ್ಕಾಗಿ ಮತ ಹಾಕಬೇಕು ಎಂದು ಸಂಸದೆ ಸುಮಲತಾ ಕರೆ ನೀಡಿದರು.
ಮತ ಹಾಕದಿರುವುದು ಬೇಜಾವ್ದಾರಿತನ: ಮಂಡ್ಯದಲ್ಲಿ ಮತದಾನ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ಎನ್ನುವುದು ಪ್ರಜಾಪ್ರಭುತ್ವದ ಸಂಭ್ರಮ. ವೋಟಿಂಗ್ ಮಾಡುವುದು ನಮ್ಮ ಜವಾಬ್ದಾರಿ. ಮತ ಹಾಕದಿದ್ದರೆ ಪ್ರಶ್ನಿಸುವ ಹಕ್ಕನ್ನು ಕಳ್ಕೋತಿರಾ. ಯಾವ ಕಷ್ಟ ಅಂತ ಮತ ಹಾಕಲು ಕೆಲವರು ಬರ್ತಿಲ್ವೋ ನನಗೆ ಅರ್ಥ ಆಗ್ತಿಲ್ಲ. ಮತ ಹಾಕದಿರುವುದು ಬೇಜಾವ್ದಾರಿತನ ತೋರಿದಂತೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಸರದಿ ಸಾಲಿನಲ್ಲಿ ನಿಂತು ಮತದಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಸೆಲೆಬ್ರೆಟಿ, ಸಂಸದೆ ಅನ್ನೋದು ಬೇರೆ. ಮತ ಹಾಕಲು ಬಂದಾಗ ಸಾಮಾನ್ಯ ಪ್ರಜೆ ರೀತಿಯೇ ನಡೆದುಕೊಳ್ಳಬೇಕು. ನಮ್ಮ ನಡೆ ಬೇರೆಯವರಿಗೆ ರೋಲ್ ಮಾಡೆಲ್ ಆಗಿರಬೇಕು. ಇಲ್ಲಿ ಬಂದು ನಾನು ಸಂಸದೆ, ಸೆಲೆಬ್ರೆಟಿ ಎಂದು ದರ್ಪ ತೋರುವುದು ಸರಿಯಲ್ಲ. ನಾವು ಎಲ್ಲಿಗಾದ್ರು ಹೋದಾಗ ಸೆಲ್ಫಿ ತೆಗೆದುಕೊಳ್ಳುವುದು ಕಾಮನ್ ಎಂದ ಸಂಸದೆ ಸುಮಲತಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕೈಕೊಟ್ಟ ಇವಿಎಂ ಮಷಿನ್: ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತ..!