ಮಂಡ್ಯ: ಉಪ ಚುನಾವಣೆ ಘೋಷಣೆಯಾದ ಬಳಿಕ ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿ ಗೆದರಿವೆ. ಕೆ. ಆರ್. ಪೇಟೆ ಜೆಡಿಎಸ್ ಶಾಸಕರ ಅನರ್ಹತೆಯಿಂದಾಗಿ ತೆರವಾಗಿರುವ ಈ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ ಹಾಗೂ ಬಿಜೆಪಿ ಸಂಭವನೀಯ ಅಭ್ಯರ್ಥಿಗಳು ಮಂಡ್ಯ ಜಿಲ್ಲೆಯ ಸಂಸದರಾಗಿರುವ ಸುಮಲತಾ ಅವರ ಒಲವು ಗಳಿಸಲು ತಯಾರಿ ಆರಂಭಿಸಿದ್ದಾರೆ.
ಡಿಸೆಂಬರ್ 5ಕ್ಕೆ ಕೆ.ಆರ್.ಪೇಟೆ ವಿಧಾನಸಭೆಗೆ ಉಪ ಚುಮಾವಣೆ ನಡೆಯಲಿದೆ. ಹೀಗಾಗಿ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಹಾಗೂ ಬಿಜೆಪಿ ಸಂಭವನೀಯ ಅಭ್ಯರ್ಥಿ ಕೆ.ಸಿ. ನಾರಾಯಣಗೌಡ ಅವರು ಸುಮಲತಾ ಬೆಂಬಲ ಗಳಿಸಲು ಕಸರತ್ತು ಆರಂಭ ಮಾಡಿದ್ದಾರೆ.
ಗುರುವಾರ ಸುಮಲತಾ ಅಂಬರೀಶ್, ಮಂಡ್ಯದ ಕೆ.ಆರ್.ಪೇಟೆಯಲ್ಲಿ ಅಧಿಕಾರಿಗಳ ಸಭೆ ಮಾಡುತ್ತಿದ್ದಾರೆ. ಈ ಸಭೆಗೆ ತಮ್ಮ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಶೈಲಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಅಭಿಮಾನಿಗಳು ಮತ್ತು ಬೆಂಬಲಿಗರು ಈ ಮನವಿಯನ್ನು ಟ್ರೋಲ್ ಮಾಡಿದ್ದು, ಇಂದಿನ ಸಭೆ ಕುತೂಹಲ ಮೂಡಿಸಿದೆ. ಸುಮಲತಾ ಅಂಬರೀಶ್ ಬೆಂಬಲ ಯಾರಿಗೆ ಸಿಗಲಿದೆ ಎಂಬ ಆತಂಕವೂ ಇಬ್ಬರಲ್ಲಿ ಮೂಡಿದೆ.