ಮಂಡ್ಯ: ಕಾವೇರಿ ನೀರು ನಿರ್ವಹಣಾ ಮಂಡಳಿ ಮೊನ್ನೆ ಕೊಟ್ಟಿದ್ದ ಷರತ್ತಿಗೊಳಪಟ್ಟ ಆದೇಶ ಜಿಲ್ಲೆಯ ರೈತರಿಗೆ ಕೊಂಚ ನೆಮ್ಮದಿ ತರಿಸಿದೆ. ಒಳ ಹರಿವಿನ ಆಧಾರದ ಮೇಲೆ ನೀರು ಬಿಡುಗಡೆಗೆ ಆದೇಶ ನೀಡಿದ್ದರಿಂದ ರೈತರು ನಿರಾಳರಾಗಿದ್ದರು. ಆದರೆ, ಈಗ ಮತ್ತೆ ಜಿಲ್ಲೆಯ ರೈತರಿಗೆ ಆತಂಕ ಎದುರಾಗಿದೆ.
ಕಾವೇರಿ ನೀರು ನಿರ್ವಹಣಾ ಮಂಡಳಿಯ ಸದಸ್ಯರು ಜೂನ್ 4 ಮತ್ತು 5 ರಂದು ಕೆಆರ್ಎಸ್ಗೆ ಭೇಟಿ ನೀಡುತ್ತಿದ್ದು, ನೀರಿನ ಸಂಗ್ರಹ ಹಾಗೂ ವರ್ಷದಲ್ಲಿ ಬಿಡುಗಡೆ ಮಾಡಿದ ಪ್ರಮಾಣದ ಪರಿಶೀಲನೆ ಮಾಡಲಿದ್ದಾರೆ. ಪರಿಶೀಲನೆ ನಂತರ ಖುದ್ದು ವಾಸ್ತವಾಂಶ ಪಡೆದು ತಮಿಳುನಾಡಿಗೆ ಪ್ರಯಾಣ ಮಾಡಲಿದ್ದಾರೆ.
ತಮಿಳುನಾಡಿನಲ್ಲಿ 2 ದಿನ ಪ್ರವಾಸ ಮಾಡಲಿರುವ ತಂಡ ನಂತರ ಪಾಂಡಿಚೇರಿ, ಕೇರಳಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಲಿದೆ. ಪ್ರವಾಸದ ವೇಳೆ ನೀರಾವರಿ ಭೂಮಿಯ ಪ್ರಮಾಣ, ಮಾಸಿಕ ಎಷ್ಟು ನೀರಿನ ಲಭ್ಯತೆ ಇದೆ, ರೈತರಿಗೆ ಹಾಗೂ ಕುಡಿಯಲು ಎಷ್ಟು ನೀರು ಬೇಕು ಎಂಬುದರ ಮಾಹಿತಿ ಸಂಗ್ರಹ ಮಾಡಲಿದೆ.
ಮಾಹಿತಿ ಸಂಗ್ರಹದ ನಂತರ ದೆಹಲಿಯಲ್ಲಿ ಮತ್ತೊಂದು ಸಭೆ ಮಾಡಿ ನೀರಿನ ಲಭ್ಯತೆ ಹಾಗೂ ಅವಶ್ಯಕತೆ ಮೇಲೆ ನೀರು ಬಿಡುಗಡೆಗೆ ಆದೇಶ ನೀಡುವ ಸಾಧ್ಯತೆ ಇದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.