ಮಂಡ್ಯ: ಲೋಕ ಸಮರದಲ್ಲಿ ಜೋಡೆತ್ತಿನ ಮಾತು ಜೋರಾಗಿಯೇ ಇತ್ತು. ನಾವು ಜೋಡೆತ್ತು ಅಂತ ಸಿಎಂ ಹೇಳಿದ್ರೆ, ಜನರೇ ನಮಗೆ ಜೋಡೆತ್ತು ಬಿರುದು ನೀಡಿದ್ದಾರೆ ಅಂತ ಯಶ್ ಹಾಗೂ ದರ್ಶನ್ ಅಬ್ಬರಿಸಿದ್ದರು. ಇದು ಒಂದು ರೀತಿಯಲ್ಲಿ ಟ್ರೆಂಡ್ ಕೂಡ ಆಗಿತ್ತು. ಜೊತೆಗೆ ಜೋಡೆತ್ತು ಸಿನಿಮಾ ಟೈಟಲ್ ಕೂಡ ರಿಜಿಸ್ಟರ್ ಆಗಿದೆ.
ಇದರ ಜೊತೆಗೆ ಮತ್ತೊಂದು ಜೋಡೆತ್ತು ಇದೀಗ ಗಮನ ಸೆಳೆಯುತ್ತಿದೆ. ಅದು ಶಿವ ಪಾರ್ವತಿಯ ಪುತ್ರ ಗಣೇಶನ ಜೋಡೆತ್ತು..! ಗಣೇಶ ಚತುರ್ಥಿಗೆ ಇನ್ನೂ ಕೆಲವು ತಿಂಗಳಿವೆ. ಆದರೆ, ಗಣೇಶ ವಿಗ್ರಹ ಮಾಡುತ್ತಿರುವ ಕಲಾವಿದರೊಬ್ಬರು ಜೋಡೆತ್ತು ಗಣೇಶ ನಿರ್ಮಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮಳವಳ್ಳಿ ತಾಲೂಕಿನ ಚಿಕ್ಕ ಮುಲಗೂಡು ಗ್ರಾಮದ ಮೂರ್ತಿ ತಯಾರಕ ಸಂಜೀವ್ ಕುಮಾರ್ ಕುಟುಂಬ ನಿರ್ಮಾಣ ಮಾಡಿರುವ ಜೋಡೆತ್ತು ಗಣೇಶ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಮಣ್ಣಿನಿಂದಲೇ ಗಣೇಶ ಮೂರ್ತಿ ನಿರ್ಮಾಣ ಮಾಡಲಾಗಿದೆ. ಸುಮಾರು ಒಂದು ವಾರಗಳ ಕಾಲ ನಿರ್ಮಾಣಕ್ಕೆ ಇಡೀ ಕುಟುಂಬ ಶ್ರಮ ವಹಿಸಿದೆ.
ಜೋಡೆತ್ತು ಗಣೇಶ ಮೂರ್ತಿಗೆ ಈಗಾಗಲೇ ಮೂವರು ಬೇಡಿಕೆ ಸಲ್ಲಿಸಿ ಮುಂಗಡ ಹಣ ನೀಡಿ ಬುಕ್ ಮಾಡಿದ್ದಾರೆ. ಸದ್ಯಕ್ಕೆ ಒಂದು ಮೂರ್ತಿ ನಿರ್ಮಾಣವಾಗಿದೆ. ಇನ್ನೆರಡು ವಾರಗಳಲ್ಲಿ ಮತ್ತೆರಡು ನಿರ್ಮಾಣ ಮಾಡಲು ಕುಟುಂಬ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಲ್ಲಾ ಮೂರ್ತಿಯೂ ಮಣ್ಣಿನಿಂದಲೇ ತಯಾರು ಮಾಡುತ್ತಿರುವುದು ವಿಶೇಷ.
ಕಹಳೆ ಗಣೇಶನೂ ಇಲ್ಲಿ ಪ್ರತ್ಯಕ್ಷ:
ಸ್ವಾಭಿಮಾನದ ಕಹಳೆ ಊದಿ ಚುನಾವಣಾ ಕಣಕ್ಕೆ ಧುಮುಕಿದ್ದ ಸುಮಲತಾ ಅಂಬರೀಶ್ ಅವರ ಚಿಹ್ನೆ ಕಹಳೆ ಊದುತ್ತಿರುವ ರೈತನ ಗುರುತಾಗಿತ್ತು. ಈಗ ಈ ಕಲಾವಿದ ಕಹಳೆ ಊದುತ್ತಿರುವ ಗಣೇಶ ಮೂರ್ತಿ ತಯಾರು ಮಾಡಿದ್ದಾನೆ. ಇದಕ್ಕೂ ಭಾರಿ ಬೇಡಿಕೆ ಬಂದಿದ್ದು, ಮತ್ತಷ್ಟು ಮೂರ್ತಿ ನಿರ್ಮಾಣ ಮಾಡಲಿದೆಯಂತೆ ಈ ಕುಟುಂಬ.
ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಯೇ ಕುಟುಂಬದ ಆಶಯ:
ಕಳೆದ 20 ವರ್ಷಗಳಿಂದ ಈ ಕುಟುಂಬ ಗಣೇಶ ಮೂರ್ತಿ ತಯಾರು ಮಾಡಿಕೊಂಡು ಬರುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಮಣ್ಣಿನ ಗಣೇಶನ ನಿರ್ಮಾಣವೇ ಇವರ ಕಾಯಕವಾಗಿದೆ. ಇದಕ್ಕೆ ಕಾರಣವೂ ಇದೆ. ಪರಿಸರ ಪ್ರೇಮ ಹಾಗೂ ತಮ್ಮಿಂದ ನೀರಿನ ಅನೈರ್ಮಲ್ಯ ಉಂಟಾಗಬಾರದು ಎಂಬ ಉದ್ದೇಶ ಹೊಂದಿದೆ ಈ ಕುಟುಂಬ.
ಅಮ್ಮನಿಂದ ವಿದ್ಯೆ ಕಲಿತ ಸಂಜೀವ್, ಇದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಕುಂಬಾರಿಕೆಯಿಂದ ಜೀವನ ನಿರ್ವಹಣೆ ಕಷ್ಟ ಎಂದು ತಿಳಿದು ಇವರು ಗಣೇಶ ಮೂರ್ತಿ ತಯಾರಿ ಆರಂಭ ಮಾಡಿದರು. ಎರಡು ವರ್ಷಗಳಿಂದ ಇವರು ತಯಾತರಿಸಿದ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಪರಿಸರ ಪ್ರೇಮವೂ ಕಾರಣವಾಗಿದೆ.
ಹಬ್ಬಕ್ಕಾಗಿ ಜನವರಿಯಿಂದಲೇ ಮೂರ್ತಿ ತಯಾರಿಕೆಗೆ ತಯಾರಿ ಮಾಡಲಾಗುತ್ತದೆ. ಕೆರೆಯ ಮಣ್ಣನ್ನು ತಂದು ಹದಗೊಳಿಸಿ ಸಿದ್ಧತೆ ಮಾಡಲಾಗುತ್ತದೆ. ನಂತರ ಮೂರ್ತಿಗಳ ತಯಾರಿಕೆ ಆರಂಭ ಮಾಡಿ, ಗಣೇಶ ಚತುರ್ಥಿಗೆ ಮಾರಾಟ ಮಾಡಲಾಗುತ್ತದೆ. ಇವರ ಈ ಪರಿಸರ ಪ್ರೇಮ ಗಣಪನ ಪ್ರೀತಿಗೆ ಪಾತ್ರವಾಗಿದೆ.