ಮಂಡ್ಯ: ಮನ್ ಮುಲ್ ಅಧಿಕಾರದ ಕನಸು ಕಂಡಿದ್ದ ಜೆಡಿಎಸ್‌ಗೆ ಆಡಳಿತ ಚುಕ್ಕಾಣಿ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ. 15 ದಿನಗಳ ಹಿಂದಷ್ಟೇ ನಡೆದ ಚುನಾವಣೆಯಲ್ಲಿ ಜೆಡಿಎಸ್ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ ಅಧಿಕಾರ ನಮ್ಮದೇ ಎಂಬ ಗುಂಗಿನಲ್ಲಿ ನಾಯಕರಿದ್ದರು. ಆದರೀಗ ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆ ಹೆಚ್ಚಿದೆ.
16 ಸದಸ್ಯ ಬಲದ ಮನ್‌ಮುಲ್ ಆಡಳಿತ ಮಂಡಳಿಯಲ್ಲಿ ಜೆಡಿಎಸ್ 8, ಕಾಂಗ್ರೆಸ್ 3, ಬಿಜೆಪಿ 1 ಹಾಗೂ 1 ನಾಮ ನಿರ್ದೇಶಿತ ಮತ್ತು ಅಧಿಕಾರಿಗಳ ಮತ ಸೇರಿ ಒಟ್ಟು 16 ಸ್ಥಾನ ಹೊಂದಿದೆ. ಆದರೆ ಜೆಡಿಎಸ್‌ನ ಓರ್ವ ಸದಸ್ಯ ರೆಬೆಲ್ ನಾಯಕ ಚಲುವರಾಯಸ್ವಾಮಿ ಆಪ್ತರ ಜೊತೆ ಗುರುತಿಸಿಕೊಂಡಿರುವುದು ಜೆಡಿಎಸ್‌ಗೆ ಆತಂಕ ತಂದಿದೆ.
ಮದ್ದೂರು ಕ್ಷೇತ್ರದಿಂದ ಮನ್ಮುಲ್ ಚುನಾವಣೆಯಲ್ಲಿ ಗೆದ್ದಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಸ್.ಪಿ ಸ್ವಾಮಿ, ಉಪ ಮುಖಮಂತ್ರಿ ಡಾ. ಅಶ್ವಥ್ ನಾರಾಯಣ ನೇತೃತ್ವದಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅಶ್ವಥ್ ನಾರಾಯಣ್ ಜೊತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ರಮೇಶ್ ಬಾಬು ಮತ್ತು ಚಲುವರಾಯಸ್ವಾಮಿ ಮೂಲಕ ಮಾತುಕತೆ ನಡೆದಿದ್ದು, ಚಲುವರಾಯಸ್ವಾಮಿ ಬಣಕ್ಕೆ ಅಧಿಕಾರ ದಕ್ಕುವ ಸಾಧ್ಯತೆ ದಟ್ಟವಾಗಿದೆ.
ಎಸ್.ಪಿ ಸ್ವಾಮಿ ಮಾಜಿ ಸಚಿವ ಚಲುವರಾಯಸ್ವಾಮಿ ಪಾಳಯದಲ್ಲಿ ಗುರುತಿಸಿಕೊಂಡಿರುವುದು ಇದಕ್ಕೆ ಸಾಕ್ಷಿ. ಒಂದೊಮ್ಮೆ ಸ್ವಾಮಿಗೆ ಅಧಿಕಾರ ನೀಡಲು ಬಿಜೆಪಿ ಒಪ್ಪಿದ್ರೆ ಜೆಡಿಎಸ್ ಅಧಿಕಾರದ ಆಸೆ ಕಮರಿ ಹೋಗುವುದು ಗ್ಯಾರಂಟಿ.
ನಿನ್ನೆಯಷ್ಟೆ ಮಾಜಿ ಸಚಿವ ಪುಟ್ಟರಾಜು ಎಸ್ಪಿ ಸ್ವಾಮಿಯನ್ನು ಬಿಜೆಪಿಗೆ ಸೇರಿಸಲು ಚಲುವರಾಯಸ್ವಾಮಿ ಮುಂದಾಗಿದ್ದಾರೆಂದು ಆರೋಪಿಸಿದ್ರು. ಬೆಂಗಳೂರಿನ ಹೋಟೆಲ್‌ನಲ್ಲಿ ಈ ಬಗ್ಗೆ ಮಾತುಕತೆ ನಡೆಸಿ, ಸ್ವಾಮಿ ಮನೆ ಹಾಳು ಮಾಡ್ತಿರೋದಾಗಿ ಕಿಡಿಕಾರಿದ್ರು. ಇದಕ್ಕೆ ಪುಷ್ಟಿ ನೀಡ್ತಿದೆ ಎಂಬಂತೆ ಇಂದು ಸ್ವಾಮಿ ಮತ್ತು ಶ್ರೀರಂಗಪಟ್ಟಣದ ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಜೊತೆ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಭೇಟಿ ಮಾಡಿರೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.