ಮಂಡ್ಯ: ಐಟಿ ದಾಳಿ ಹಿಂದೆ ಬಿಜೆಪಿ ನಾಯಕರ ಕೈವಾಡ ಇದೆ. ಬೆಂಗಳೂರಿನಲ್ಲಿ ಕುಳಿತು ತಮ್ಮ ಹೆಸರು ಬರೆದುಕೊಟ್ಟು ದಾಳಿ ಮಾಡಿಸಿದ್ದಾರೆ ಎಂದು ಸಚಿವ ಪುಟ್ಟರಾಜು ಆರೋಪಿಸಿದ್ದಾರೆ.
ಈ ಟಿವಿ ಭಾರತ ಜೊತೆ ಮಾತನಾಡಿದ ಅವರು, ಇದೊಂದು ರಾಜಕೀಯ ಪ್ರೇರಿತ ದಾಳಿ. ಬಿಜೆಪಿಗೆ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ನಮ್ಮ ಮನೆ ಮೇಲೆ ನಾಲ್ಕು ಮಂದಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೈಸೂರಿನ ಮನೆ ಮೇಲೆ 8 ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಲ್ಲವೂ ಕಾನೂನಾತ್ಮಕವಾಗಿಯೇ ಇದೆ. ಯಾವುದೇ ಆತಂಕ ಇಲ್ಲ ಎಂದು ಪುಟ್ಟರಾಜು ತಿಳಿಸಿದರು.
ಇನ್ನು ಈ ದಾಳಿ ಬಗ್ಗೆ ಕಾರ್ಯಕರ್ತರು ಮತ್ತು ಜನ ಆತಂಕ ಪಡುವ ಅಗತ್ಯವಿಲ್ಲ. ತಾಳ್ಮೆ ಕಳೆದುಕೊಳ್ಳಬೇಡಿ ಎಂದು ಸಚಿವ ಪುಟ್ಟರಾಜು ಮನವಿ ಮಾಡಿದ್ದಾರೆ.