ಮಂಡ್ಯ: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದೆ. ಅದೇ ದಿನ ಸಕ್ಕರೆನಗರಿ ಮಂಡ್ಯದಲ್ಲೂ ರಾಮಮಂದಿರವೊಂದು ಉದ್ಗಾಟನೆಗೊಳ್ಳುತ್ತಿದೆ. ಇದರ ಮತ್ತೊಂದು ವಿಶೇಷತೆ ಎಂದರೆ ಇಲ್ಲಿಯೂ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಕೆತ್ತನೆ ಮಾಡಿರುವ ಮೂರ್ತಿಯನ್ನೆ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಮಂಡ್ಯದಲ್ಲಿ ಲೇಬರ್ ಕಾಲೋನಿಯಲ್ಲಿ ಜಿರ್ಣೋದ್ಧಾರಗೊಂಡಿರುವ ರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿದೆ. ವರ್ಷದ ಹಿಂದೆಯೇ ಮೂರ್ತಿಯನ್ನು ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದರು. ಆದರೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ತಡವಾದ ಹಿನ್ನೆಲೆಯಲ್ಲಿ ಪ್ರತಿಷ್ಠಾಪನೆ ಆಗಿರಲಿಲ್ಲ. ಇದೀಗ ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲೇ ಮಂಡ್ಯದಲ್ಲೂ ಕೂಡ ಶ್ರೀರಾಮನ ಪ್ರತಿಷ್ಠಾಪನೆ ಆಗಲಿದೆ.
ಶ್ರೀರಾಮನ ಮೂರ್ತಿ ಮೂರುಕಾಲು ಅಡಿ ಎತ್ತರವಿದ್ದು, ಶ್ರೀರಾಮನ ಜೊತೆಗೆ ಲಕ್ಷಣ, ಸೀತೆ, ಹನುಮನ ವಿಗ್ರಹಗಳು ಸಹಾ ಇರಲಿದೆ. ಈ ಎಲ್ಲ ಮೂರ್ತಿಗಳನ್ನು ಯೋಗಿರಾಜ್ ಅವರೇ ಕೆತ್ತನೆ ಮಾಡಿದ್ದಾರೆ. ಇನ್ನು ನೂರಾರು ವರ್ಷಗಳ ಇತಿಹಾಸ ಇರುವ ರಾಮಮಂದಿರ ಜೀರ್ಣೋದ್ದಾರ ಆಗಿದೆ. ದೇವಸ್ಥಾನ ಲೋಕಾರ್ಪಣೆ ದಿನ ಹತ್ತಿರವಾಗುತ್ತಿದ್ದಂತೆ ಮಂಡ್ಯದ ಜನರಲ್ಲಿ ಸಂತಸ ಮನೆ ಮಾಡಿದೆ. ಶ್ರೀರಾಮ ಸೇವಾ ಟ್ರಸ್ಟ್ ವತಿಯಿಂದ ಜನವರಿ 22ರಂದು ಪೂಜಾ ಕೈಂಕರ್ಯಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ನಗರಸಭೆ ಸದಸ್ಯ ನಾಗೇಶ್ ಎಂಬುವವರು ಮಾತನಾಡಿ, ಸುಮಾರು 70 ವರ್ಷಕ್ಕೂ ಹಿಂದಿನ ಹಳೆಯ ದೇವಸ್ಥಾನ ಇದಾಗಿದೆ. ಸದ್ಯ ಮಂದಿರ ಜೀರ್ಣೋದ್ಧಾರಗೊಂಡಿದೆ. ಇದೇ ತಿಂಗಳು 19 ರಿಂದ ದೇವಸ್ಥಾನದ ಪೂಜಾ ಕೈಂಕಾರ್ಯಗಳು ಆರಂಭಗೊಳ್ಳಲಿವೆ. 20ನೇ ತಾರೀಖಿನಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂದಿರ ಉದ್ಘಾಟನೆ ದಿನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಸಂಸದೆ ಸುಮಲತಾ ಅಂಬರೀಶ್, ಶಾಸಕ ಪಿ ರವಿಕುಮಾರ್ ಗೌಡ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಮೇಶ್ ಎಂಬುವವರು ಮಾತನಾಡಿ, ಜೀರ್ಣೋದ್ದಾರಕ್ಕಾಗಿ ಹಳೆ ಮಂದಿರವನ್ನು 14 ವರ್ಷಗಳ ಹಿಂದೆಯೇ ಕಡೆವಲಾಗಿತ್ತು. ಆದರೇ ಕಾಕತಾಳಿಯ ಎಂಬಂತೆ ಈ ವರ್ಷ ಮಂದಿರ ನಿರ್ಮಾಣದ ಕಾರ್ಯ ಸಂಪೂರ್ಣಗೊಂಡಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನವೇ ಈ ಮಂದಿರವೂ ಉದ್ಘಾಟನೆಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮಂದಿರ ಜೀರ್ಣೋದ್ದರಾಕ್ಕೆ ಜನರು ಸೇರಿದಂತೆ ರಾಜಕೀಯ ನಾಯಕರಿಂದ ಕಾಣಿಕೆ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಶ್ರೀರಾಮನ ಟ್ಯಾಟೂ ಉಚಿತ: ಬೆಳಗಾವಿಯಲ್ಲಿ ಶಾಸಕನಿಂದ ವಿನೂತನ ಅಭಿಯಾನ