ಮಂಡ್ಯ: ಸರ್ಕಾರಗಳಲ್ಲಿ ಇದರಂತಹ ಬೋಗಸ್ ಸರ್ಕಾರವನ್ನು ನಾನು ನೋಡಿಲ್ಲ ಎಂದು ಇತಿಹಾಸ ತಜ್ಞ ನಂಜೇರಾಜೇ ಅರಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಸರ್. ಎಂವಿ ಪ್ರತಿಮೆ ಮುಂಭಾಗ ನಡೆಯುತ್ತಿರುವ 33ನೇ ದಿನದ ಮೈಷುಗರ್ ಹೋರಾಟದಲ್ಲಿ ನಂಜೇರಾಜೇ ಅರಸ್ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು. ನಷ್ಟ ಎಂಬ ಕಾರಣ ನೀಡಿ ಖಾಸಗಿಯವರಿಗೆ ಮಾರಾಟ ಮಾಡುವುದು ಸರಿಯಲ್ಲ. ಐತಿಹಾಸಿಕವಾಗಿ ರಾಜರು ಕಟ್ಟಿದಂತಹ ಕಾರ್ಖಾನೆ ಉಳಿಸಬೇಕು ಎಂದು ಅವರು ಒತ್ತಾಯಿಸಿದರು.
ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲ
ಮೈಸೂರಿನಲ್ಲಿ ದಸರಾ ಆಚರಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಹೆಚ್ಚಿನ ಜನರು ಬರಲೆಂದು ಲೈಟ್ಸ್ ಹಾಕ್ತಾರೆ. ಆದರೆ, ಮೆರವಣಿಗೆ ಮಾತ್ರ ಕೋಟೆ ಒಳಗೆ, ಕೊರೊನಾ ಬರುತ್ತದೆ ಎಂದು ಹೇಳುತ್ತಾರೆ. ಲಕ್ಷಾಂತರ ಜನ ಸೇರಿಸಿಕೊಂಡು ಸಭೆ ಸಮಾರಂಭ, ಯಾತ್ರೆ ಮಾಡಿದರೆ ಕೊರೊನಾ ಬರಲ್ಲ. ಜನರು ದಸರಾಗೆ ಬಂದರೆ ಕೊರೊನಾ ಅಂತೆ.. ಇದೆಲ್ಲ ಸರ್ಕಾರದ ನಾಟಕ ಎಂದು ಕಿಡಿಕಾರಿದರು.
ಸರ್ಕಾರ ಜ್ಯಾತ್ಯತೀತ ಸರ್ಕಾರವಾದರೆ ಯಾವುದೇ ಧಾರ್ಮಿಕ ಆಚರಣೆ ಮಾಡುವಂತಿಲ್ಲ. ಚಾಮುಂಡಿಯನ್ನು ಹಿಂದೂ ದೇವರು ಎಂದು ಕರೆಯುತ್ತೀರಿ. ಧಾರ್ಮಿಕ ಉತ್ಸವ ಮಾಡುವುದಕ್ಕೆ ಸರ್ಕಾರಕ್ಕೆ ಹಕ್ಕಿಲ್ಲ. ಆದರೂ ಮಾಡುತ್ತಿದ್ದಾರೆ.
ಸಾವಿರಾರು ಜನ ಲೈಟಿಂಗ್ ನೋಡೋಕೆ ಹೋಗುತ್ತಿದ್ದಾರೆ. ಲೈಟ್ ಹಾಕಿದ್ದೀವಿ ನೋಡಿ ಬನ್ನಿ ಎಂದು ಸರ್ಕಾರವೇ ಕರೆಯುತ್ತಿದೆ. ಇದರಿಂದ ಕೊರೊನಾ ಬರಲ್ವಾ? ಸರ್ಕಾರಕ್ಕೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲ ಎಂದರು.
ದಸರಾ ಆಚರಣೆ ಮಾಡುವುದಾದರೆ ಮಂಟಪದವರೆಗೆ ಆನೆ ತೆಗೆದುಕೊಂಡು ಹೋಗಬೇಕಿತ್ತು. ಎಲ್ಲ ವ್ಯವಸ್ಥೆ ಮಾಡಿ ಇದನ್ನು ಯಾಕೆ ಮಾಡುತ್ತಿಲ್ಲ. ಇಷ್ಟಕ್ಕೆ ಮಾತ್ರ ಯಾಕೆ ಸೀಮಿತ ಮಾಡಿದಿರಿ? ಸರ್ಕಾರದ ಈ ಧೋರಣೆಯನ್ನು ನಾನು ಒಪ್ಪುವುದಿಲ್ಲ ಎಂದು ನಂಜೇರಾಜೇ ಅರಸ್ ಆಕ್ರೋಶ ವ್ಯಕ್ತಪಡಿಸಿದರು.