ಮಂಡ್ಯ: ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿನ ಹಾಹಾಕಾರವೇ ಸದ್ದು ಮಾಡುವ ಗ್ರಾಮಗಳಿರುವ ಜಿಲ್ಲೆ ಇದು. ತಾಲೂಕಿನ 30 ಹಳ್ಳಿಗಳ ನಿವಾಸಿಗಳು ನೀರಿಗಾಗಿ ಕಿಲೋ ಮೀಟರ್ಗಟ್ಟಲೆ ಅಲೆದಾಡುವುದು ದಶಕಗಳಿಂದಲೂ ಇಲ್ಲಿ ನಡೆದುಕೊಂಡು ಬಂದಿದೆ.
ಜಿಲ್ಲೆಯ ನಾಗಮಂಗಲ ಸುತ್ತಲಿನ ಗ್ರಾಮಗಳ ನೀರಿನ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಕೊಳವೆ ಬಾವಿಗಳ ಮೊರೆ ಹೋಗಿದ್ದಾರೆ. ಆದರೂ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ನೂರಾರು ಅಡಿ ಭೂಮಿ ಕೊರೆಯಲಾಗಿದೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಕೈಕೊಡುತ್ತಿವೆ.
ಬೇಸಿಗೆ ಆರಂಭಕ್ಕೂ ಮುನ್ನ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕು ಎಂದು ದಶಗಳಿಂದ ಆಗ್ರಹಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ತಾತ್ಕಾಲಿಕ ಕೊಳವೆ ಬಾವಿಯಿಂದ ಯಾವುದೇ ಪರಿಹಾರ ಇಲ್ಲ ಎಂದು ಗ್ರಾಮಗಳ ಪ್ರವಾಸ ಕೈಗೊಂಡ ಶಾಸಕ ಸುರೇಶ್ ಗೌಡ ಅವರನ್ನು ಸ್ಥಳೀಯರು ಒತ್ತಾಯಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಶ್ವತ ಯೋಜನೆ ಬೇಕಿದೆ. ದಶಕಗಳ ಇವರ ಬೇಡಿಕೆಗೆ ಸರ್ಕಾರ ಈಗಲಾದರೂ ಸ್ಪಂದಿಸಬೇಕು ಎಂದು ಶಾಸಕ ಸುರೇಶ್ ಮನವಿ ಮಾಡಿದರು.