ಮಂಡ್ಯ: ಕೆಆರ್ಎಸ್ ಡ್ಯಾಂನಲ್ಲಿ ಬಿರುಕು ಮತ್ತು ಸುತ್ತಾಮುತ್ತ ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರ್ನಾಲ್ಕು ದಿನಗಳಿಂದಲೂ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಡುವೆ ವಾಕ್ಸಮರ ನಡೆಯುತ್ತಲೇ ಇದೆ. ಈ ಮಧ್ಯೆ ತಮ್ಮ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ನೀಡಿರುವ ಹೇಳಿಕೆ ಕುರಿತು ಮಾಧ್ಯಮಗಳ ಸಿಬ್ಬಂದಿ ಕೇಳಿದ ಪ್ರಶ್ನೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸದೆ ಕೈ ಮುಗಿದರು.
ಕೆ.ಎಂ ದೊಡ್ಡಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿ.ಮಾದೇಗೌಡರ ಆರೋಗ್ಯ ವಿಚಾರಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಿರಿಯ ರಾಜಕಾರಣಿ ಜಿ.ಮಾದೇಗೌಡರ ಆರೋಗ್ಯ ವಿಚಾರಿಸಲು ಬಂದಿದ್ದೇನೆ. ಜಿಲ್ಲೆಯ ಜನ, ಸಮಸ್ಯೆಗಳ ಬಗ್ಗೆ ಮಾದೇಗೌಡರು ಧ್ವನಿ ಎತ್ತುತ್ತಿದ್ದರು. ಈಗ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಿ ಹಿಂದಿನಂತಿರಲು ಭಗವಂತನಲ್ಲಿ ಕೋರುತ್ತೇನೆ ಎಂದರು.
'ನಾನು ಸಿಎಂ ಆಗಿದ್ದಾಗ ಕೆಆರ್ಎಸ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆದಿಲ್ಲ'
ಗಣಿ ಸಚಿವ ಮುರುಗೇಶ್ ನಿರಾಣಿ ಅವರು ಕಳೆದ 4-5 ತಿಂಗಳಿಂದ ಕೆಆರ್ಎಸ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಂತಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ನಾನು ಮುಖ್ಯಮಂತ್ರಿ ಆಗಿದ್ದಾಗ ಕೆಆರ್ಎಸ್ನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಿದ್ದೆ. ನನ್ನ ಪದಗಳನ್ನು ತಿರುಚಿ ತೇಜೋವಧೆ ಮಾಡಲಾಗ್ತಿದೆ. ರಾಜ್ಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಜನರು, ರೈತರು ಹೆಚ್ಚಿನ ಸಮಸ್ಯೆಯಲ್ಲಿದ್ದಾರೆ. ಇದರ ಬಗ್ಗೆ ಮಾಧ್ಯಮಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.
'ಎಂದಿಗೂ ಫೋನ್ ಟ್ಯಾಪ್ ಮಾಡಿಸಿಲ್ಲ'
ಕುಮಾರಸ್ವಾಮಿ ಎಂದಿಗೂ ಫೋನ್ ಟ್ಯಾಪ್ ಮಾಡಿಸಿಲ್ಲ. ಹಾಗೆ ಮಾಡಿದ್ದರೆ ನಾನು ಸರ್ಕಾರ ಕಳೆದುಕೊಳ್ಳುತ್ತಿದ್ನಾ? ಎಂದು ಹೇಳಿದರು.
'ಕೆಆರ್ಎಸ್ ಇನ್ನೂ 100 ವರ್ಷ ಅಲ್ಲಾಡಲ್ಲ'
ಕೆಆರ್ಎಸ್ ಇನ್ನೂ 100 ವರ್ಷ ಅಲ್ಲಾಡಲ್ಲ. ನನ್ನ ಕಾಲದಲ್ಲಿ ಅಕ್ರಮ ಗಣಿಗಾರಿಕೆಗೆ ಆಸ್ಪದ ಕೊಟ್ಟಿರಲಿಲ್ಲ. ಅಂಬಿ ಅವರ ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಟ್ಟೆ. ಆದ್ರೆ ಬೇರೆ ಪಕ್ಷದವರು ವಿಷ್ಣುವರ್ಧನ್‌ಗೆ ಏನು ಮಾಡಿದರು? ಸಮಾಧಿಗೆ ಜಾಗ ಕೊಟ್ರಾ ಎಂದು ಪ್ರಶ್ನಿಸಿದರು.
'ಸುಮಲತಾ ವಿಚಾರವಾಗಿ ನನ್ನನ್ನು ಕೇಳಬೇಡಿ'
ಸುಮಲತಾ ವಿಚಾರವಾಗಿ ನನ್ನನ್ನು ಕೆರಳಿಸಬೇಡಿ. ಇಲ್ಲಿಗೆ ಈ ವಿಚಾರ ಬಿಡಿ. ಸುಮಲತಾ ವಿಶೇಷ ಮಹಿಳೆ. ಆ ಮಹಿಳೆ ಬಗ್ಗೆ ನಾನು ಯಾಕೆ ಮಾತನಾಡಲಿ ಎಂದು ಕೈಮುಗಿದರು. ನನಗೆ ಮಹಿಳೆಯರ ಬಗ್ಗೆ ಅಪಾರ ಗೌರವವಿದೆ. ಬಡ ಮಹಿಳೆಯರಿಗೆ ಯಾವ ರೀತಿ ಗೌರವ ನೀಡುತ್ತಾ ಬಂದಿದ್ದೇನೆ ಎಂದು ನಿಮಗೆ ಗೊತ್ತು. ಆದ್ರೆ ಇವರು ವಿಶೇಷ ಮಹಿಳೆ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂದು ಯಾರು ಹೇಳಿಕೊಡಬೇಕಿಲ್ಲ ಎಂದರು.
ಇದನ್ನೂ ಓದಿ: ಪ್ರಜ್ವಲ್ ಹೆಸರಲ್ಲಿ ಮುಂದುವರಿದ ಹಗ್ಗಜಗ್ಗಾಟ.. ದೇವೇಗೌಡರ ಕುಟುಂಬವನ್ನು ಒಡೆಯುವ ತಂತ್ರ ನಡೆಯುತ್ತಿದೆ ಎಂದ ಹೆಚ್ಡಿಕೆ