ಮಂಡ್ಯ: ಜಿಲ್ಲಾ ಹಾಲು ಒಕ್ಕೂಟ(ಮನ್ಮುಲ್)ದಲ್ಲಿ ನೀರು ಮಿಶ್ರಿತ ಹಾಲು ಹಗರಣ ಸಿಐಡಿ ತನಿಖೆ ನಡೆಯುತ್ತಿರುವುದರ ನಡುವೆಯೂ 191 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. 2020ನೇ ಸಾಲಿನವರೆಗೂ ಒಕ್ಕೂಟಕ್ಕೆ 520 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಮಂಜೂರಾಗಿರುವ 520 ಹುದ್ದೆಗಳ ಪೈಕಿ 280 ಕಾಯಂ ಉದ್ಯೋಗಿಗಳು ಮತ್ತು 7 ಸೂಪರ್ ನ್ಯೂಮರರಿ ಉದ್ಯೋಗಿಗಳು ಸೇರಿದಂತೆ ಒಟ್ಟು 287 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಒಕ್ಕೂಟದಲ್ಲಿ 14 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ, 1 ಲಕ್ಷ ಲೀಟರ್ ಸಾಮರ್ಥ್ಯದ ಯುಹೆಚ್‌ಟಿ ಪ್ಲಾಂಟ್ ಹಾಗೂ 30 ಮೆಟ್ರಿಕ್ ಟನ್ ಹಾಲಿನ ಪುಡಿ ಘಟಕ ಪ್ರಾರಂಭಿಸಲು ವಿಸ್ತರಣಾ ಕಾರ್ಯಗಳು ಪ್ರಗತಿಯಲ್ಲಿವೆ. ಈಗಾಗಲೇ 239 ಬಿಎಂಸಿಇ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ 65 ಬಿಎಂಸಿ ಕೇಂದ್ರಗಳನ್ನು ಗ್ರಾಮಾಂತರ ಮಟ್ಟದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
ನೇರ ನೇಮಕಾತಿಗೆ ಆದೇಶ
ಇವುಗಳ ಪರಿಣಾಮಕಾರಿ ಕಾರ್ಯನಿರ್ವಹಣೆ, ಮಾರುಕಟ್ಟೆ ವಿಸ್ತರಣೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಪರಿಣತಿ ಹೊಂದಿರುವ ಉದ್ಯೋಗಿಗಳ ಅಗತ್ಯವಿದ್ದು, 2020 ರಿಂದ 2022ನೇ ಸಾಲಿನವರೆಗೆ ಒಟ್ಟು 42 ಉದ್ಯೋಗಿಗಳು ನಿವೃತ್ತಿ ಹೊಂದುತ್ತಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.
ಈ ಹಿನ್ನೆಲೆ ಒಕ್ಕೂಟದ ತಜ್ಞರ ಕೂಟ ಸಮಿತಿ ಏಪ್ರಿಲ್ 29ರಂದು ನಡೆದ ಸಭೆಯಲ್ಲಿ ಖಾಲಿ ಇರುವ 280 ಹುದ್ದೆಗಳಲ್ಲಿ 191 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಣಯಿಸಿ ಕಳೆದ ಆ.30ರಂದು ಆಡಳಿತ ಮಂಡಳಿ ಸಭೆಯು ಅನುಮೋದನ ನೀಡಿದೆ.
2018-19 ರಿಂದ 2020-2021ನೇ ಸಾಲಿನ ಒಕ್ಕೂಟದ ವ್ಯಾಪಾರ ವಹಿವಾಟು, ನಿವ್ವಳ ಲಾಭ, ಸಿಬ್ಬಂದಿ ವೆಚ್ಚ ಹಾಗೂ ವ್ಯಾಪಾರ ವಹಿವಾಟಿಗೆ ಸಿಬ್ಬಂದಿ ವೆಚ್ಚ ಸೇರಿ ಅನುಮತಿ ನೀಡಿದೆ. ಮಾರ್ಚ್ 2021ರ ಅಂತ್ಯಕ್ಕೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವೆಚ್ಚ 29.95 ಕೋಟಿ ರೂ. ಇದ್ದು ವ್ಯಾಪಾರ ವಹಿವಾಟು 1.150 ಕೋಟಿ ರೂ. ಗೆ ಶೇ.2.60 ಆಗಿರುತ್ತದೆ.
ನೇಮಕಾತಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್
ಈಗ ಹೊಸದಾಗಿ ನೇಮಕ ಮಾಡಿಕೊಳ್ಳಲಿರುವ 191 ಸಿಬ್ಬಂದಿಗೆ ವಾರ್ಷಿಕ ವೆಚ್ಚ 9.26 ಕೋಟಿ ರೂ. ಗಳಾಗಿದೆ. ಇದು ಸೇರಿ ಒಟ್ಟು ವಾರ್ಷಿಕ ಸಿಬ್ಬಂದಿ ವೆಚ್ಚ 39.20 ಕೋಟಿ ರೂಪಾಯಿಗಳಾಗಿದ್ದು, ವ್ಯಾಪಾರ ವಹಿವಾಟಿಗೆ ಸಿಬ್ಬಂದಿ ವೆಚ್ಚದ ಪ್ರಮಾಣ ಶೇ.3.40 ಆಗಲಿದೆ ಎಂದು ಹೇಳಿದೆ.
ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿ 1960 ನಿಯಮ 17ರನ್ವಯ ಯಾವುದೇ ಸಹಕಾರ ಸಂಘವು ಸತತವಾಗಿ ನಷ್ಟದಲ್ಲಿದ್ದಲ್ಲಿ ಅಥವಾ ವಾರ್ಷಿಕ ವಹಿವಾಟು ಅಥವಾ ದುಡಿಯುವ ಬಂಡವಾಳಕ್ಕೆ ಸಿಬ್ಬಂದಿ ವೆಚ್ಚವು ಶೇ.2ಕ್ಕಿಂತ ಹೆಚ್ಚಿದ್ದಲ್ಲಿ ಸರ್ಕಾರದ ಅನುಮೋದನೆ ಪಡೆದು ನೇಮಕಾತಿ ಮಾಡಿಕೊಳ್ಳಲು ಅವಕಾಶವಿರುವುದಾಗಿ ತಿಳಿಸಲಾಗಿದೆ.
ಒಕ್ಕೂಟ ಪ್ರಸ್ತಾವನೆಯನ್ನು ಪರಿಶೀಲಿಸಿದ ರಾಜ್ಯ ಸರ್ಕಾರ ಸಹಕಾರ ಸಂಘಗಳ ನಿಯಮಾವಳಿ 1960 ನಿಯಮ 17(1)ರನ್ವಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಕೋರಿರುವಂತೆ 191 ಹುದ್ದೆಗಳನ್ನು ಮಂಜೂರು ಮಾಡಲು ಸರ್ಕಾರ ತೀರ್ಮಾನಿಸಿ ಆದೇಶ ಹೊರಡಿಸಿದೆ. ಅದರನ್ವಯ ಒಕ್ಕೂಟದಲ್ಲಿ ಖಾಲಿ ಇರುವ 240 ಹುದ್ದೆಗಳ ಪೈಕಿ 191 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿ ಸಹಕಾರ ಇಲಾಖೆಯ ಪದನಿಮಿತ್ತ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ತುಮಕೂರು: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಚಿರತೆ ದಾಳಿ