ಮಂಡ್ಯ: ಸರ್ಕಾರಿ ಶಾಲೆ, ವಸತಿ ನಿಲಯ ಅಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಜಿಲ್ಲೆಯ ಸರ್ಕಾರಿ ವಸತಿ ಶಾಲೆಗಳ ಸಾಧನೆ ಕೇಳಿದರೆ ನಿಮಗೆ ಅಚ್ಚರಿ ಆಗುವುದರಲ್ಲಿ ಅನುಮಾನವೇ ಇಲ್ಲ. ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ.
ಕಳೆದ 2019-2020ನೇ ಸಾಲಿನ ಫಲಿತಾಂಶ ಜಿಲ್ಲೆಯ ಸಾಧನೆಗೆ ಸಾಕ್ಷಿಯಾಗಿದೆ. ಜಿಲ್ಲೆಯ 18 ಸರ್ಕಾರಿ ವಸತಿ ಶಿಕ್ಷಣ ಸಂಸ್ಥೆಗಳು ಶೇಕಡಾ 100 ರಷ್ಟು ಫಲಿತಾಂಶವನ್ನು ತಂದುಕೊಟ್ಟಿವೆ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆ, ಬಿಸಿಎಂ ವಸತಿ ಶಾಲೆಗಳು ಶೇ100ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ ಮಾದರಿಯಾಗಿವೆ.
ಸಮಾಜ ಕಲ್ಯಾಣ ಇಲಾಖೆಯ 7 ಮೊರಾರ್ಜಿ ದೇಸಾಯಿ ವಸತಿ ಶಾಲೆ, 6 ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಹಿಂದುಳಿದ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಶೇ100ರಷ್ಟು ಫಲಿತಾಂಶ ಹೊಂದಿವೆ. ಶಾಲೆಯ ಶಿಕ್ಷಕರ ಪರಿಶ್ರಮ ವಿದ್ಯಾರ್ಥಿಗಳ ಸಾಧನೆಗೆ ಕಾರಣವಾಗಿದೆ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದಲಿಂಗೇಶ್.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕಾ 614, ಜ್ಞಾನೇಶ್ ಗೌಡ ಯು.ಎಸ್ 613 ಹಾಗೂ ಲಿಖಿತಾ 609 ಅಂಕ ಪಡೆಯುವ ಮೂಲಕ ತೇರ್ಗಡೆ ಹೊಂದಿದ್ದಾರೆ. ಕೆಲವು ವಸತಿ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಎ ಗ್ರೇಡ್‌ನಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೆಲವು ವಸತಿ ಶಾಲೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಎ ಗ್ರೇಡ್ ಫಲಿತಾಂಶ ಪಡೆದುಕೊಂಡಿದ್ದು, ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ.