ಮಂಡ್ಯ : ಗಜೇಂದ್ರ ಮೋಕ್ಷ ಕೊಳವೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಶ್ರೀರಂಗ ಮೂಕ ಪ್ರಾಣಿಯ ಗೋಳು ನೋಡಲಾಗದೇ ಆನೆಯನ್ನು ಬಂದು ರಕ್ಷಣೆ ಮಾಡಿದ. ಆದರೆ, ಗಜೇಂದ್ರ ಮೋಕ್ಷ ಹೆಸರಿನ ಕೊಳಕ್ಕೆ ಇನ್ನೂ ಮೋಕ್ಷವೇ ಸಿಕ್ಕಿಲ್ಲ.
ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದ ಸಮೀಪವೇ ಇತ್ತೀಚೆಗೆ ಗಜೇಂದ್ರ ಮೋಕ್ಷ ಕೊಳ ಸಿಕ್ಕಿತ್ತು. ಅದನ್ನು ಉತ್ಖನನ ಮಾಡಿದ್ದ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಜೀರ್ಣೋದ್ಧಾರ ಮಾಡುವ ಕೆಲಸಕ್ಕೆ ಮುಂದಾಗಿದ್ದರು. ಆದರೆ, ಕೊಳ ಉತ್ಖನನವಾಗಿ 4 ವರ್ಷ ಕಳೆದರೂ ಇನ್ನೂ ಜೀರ್ಣೋದ್ಧಾರವಾಗಿಲ್ಲ.
ತನ್ನ ಒಡಲಿನಲ್ಲಿ ನಿಗೂಢ ಇತಿಹಾಸವನ್ನು ಹೊಂದಿರುವ ಕೊಳಕ್ಕೆ ಮೋಕ್ಷ ಸಿಕ್ಕರೆ ಶ್ರೀರಂಗನ ಅಭಿಷೇಕಕ್ಕೆ ಇದೇ ಕೊಳದ ನೀರನ್ನು ಬಳಸುವುದರ ಜೊತೆಗೆ ಬರುವ ಭಕ್ತರ ಉಪಯೋಗಕ್ಕೂ ಬರುತ್ತದೆ.
ಕೊಳದ ಜೀರ್ಣೋದ್ಧಾರಕ್ಕೆ ಸರ್ಕಾರದ ಜೊತೆಗೆ ಸ್ಥಳೀಯ ಸಂಘ ಸಂಸ್ಥೆಗಳು ಕೈ ಜೋಡಿಸಲು ಮುಂದೆ ಬರುತ್ತಿವೆ. ಆದರೆ, ಅಧಿಕಾರಿಗಳು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿರೋದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು, ಐತಿಹಾಸಿಕ ಹಿನ್ನೆಲೆಯ ಕೊಳದ ರಕ್ಷಣೆಗೆ ಮುಂದಾಗಬೇಕಾಗಿದೆ.