ಮಂಡ್ಯ: ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಿಗಳಿಗೆ ಇಂದು ಕೆ.ಆರ್. ಪೇಟೆಯಲ್ಲಿ ಪುರಸಭೆ ಸದಸ್ಯರೊಬ್ಬರು 2 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪುರಸಭೆ ಸದಸ್ಯ ಲೋಕೇಶ್ ಎಂಬುವರು ಎಂಜಿನಿಯರಿಂಗ್, ಡಿಪ್ಲೊಮೋ ವಿದ್ಯಾರ್ಥಿಗಳಿಗೆ ಬೇಕಾದ ಅವಶ್ಯಕ ಪುಸ್ತಕಗಳನ್ನು ವಿತರಣೆ ಮಾಡಿದರು. ಇದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿರುವ ಸ್ಪರ್ಧಿಗಳಿಗೂ 2 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ನೀಡಿದರು.
ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡರ ಸಮ್ಮುಖದಲ್ಲಿ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಸಲು ಈ ಉಚಿತ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ವಿತರಣೆಯ ವಿಚಾರ ತಿಳಿದ ವಿದ್ಯಾರ್ಥಿಗಳು, ಕೆಲ ಪೋಷಕರು ಸರತಿ ಸಾಲಿನಲ್ಲಿ ನಿಂತು ಪುಸ್ತಕಗಳನ್ನು ಪಡೆದುಕೊಂಡರು.
ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅನರ್ಹ ಶಾಸಕ ನಾರಾಯಣಗೌಡ, ಪುರಸಭೆ ಸದಸ್ಯ ಲೋಕೇಶ್, ಪುಸ್ತಕ ಪಡೆದು ಇದರಿಂದ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕು ಎಂದು ಸಲಹೆ ನೀಡಿದರು.