ಮಂಡ್ಯ : ಜಿಲ್ಲೆಯಲ್ಲಿ ಮತ್ತೆ ಕೊರೊನಾ ಕಾಟ ಮುಂದುವರೆದಿದೆ. ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಸೇರಿ ವೈದ್ಯರಿಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ನರ್ಸಿಂಗ್ ಕಾಲೇಜಿನ 4 ವಿದ್ಯಾರ್ಥಿಗಳಲ್ಲಿ ಕೊರೊನಾ ದೃಢಪಟ್ಟಿದೆ. ಇನ್ನು ಈ ವಿದ್ಯಾರ್ಥಿಗಳು ಕೋಲ್ಕತ್ತಾ ಮೂಲದವರು ಎಂದು ತಿಳಿದು ಬಂದಿದೆ.
ಡಿ.20ರಂದು ಕೋಲ್ಕತ್ತಾದಿಂದ ಆಗಮಿಸಿದ್ದ 67 ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಗಿತ್ತು. ಅದರಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕಿತ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದ 137 ಜನರಿಗೂ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಸಂಜೆ ಸಂಪರ್ಕಿತರ ರಿಪೋರ್ಟ್ ಬರುವ ಸಾಧ್ಯತೆ ಇದೆ.
4 ಸೋಂಕಿತ ವಿದ್ಯಾರ್ಥಿಗಳಲ್ಲಿ ಒಮಿಕ್ರಾನ್ ಸೋಂಕು ಇದೆಯೋ, ಇಲ್ಲವೋ ಎಂಬುದಕ್ಕೆ ಜಿನೋ ಸಿಕ್ವೆನ್ಸಿ ಟೆಸ್ಟ್ ವರದಿ ಕಳುಹಿಸಲಾಗಿದೆ. ಸದ್ಯ ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರೂ ವೈದ್ಯರಿಗೆ ವಕ್ಕರಿಸಿದ ಮಹಾಮಾರಿ. ಆದಿಚುಂಚನಗಿರಿ ಆಸ್ಪತ್ರೆ ಸರ್ಜನ್ ಹಾಗೂ ಬೆಳ್ಳೂರು ಆರೋಗ್ಯ ಕೇಂದ್ರದ ವೈದ್ಯರಲ್ಲಿ ಸೋಂಕು ಕಾಣಿಸಿದೆ. ವೈದ್ಯರಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣದ ಹಿನ್ನೆಲೆ ಅವರನ್ನು ಕೋವಿಡ್ ಸೆಂಟರ್ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.