ಮಂಡ್ಯ: ಜಲಜೀವನ್ ಮಿಷನ್ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ಸೂಕ್ತ ತನಿಖೆ ನಡೆಸುವಂತೆ ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿದ್ದೇನೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಈಗಾಗಲೇ ಜಿ.ಪಂ., ತಾ.ಪಂ., ಗ್ರಾ.ಪಂ. ಹಾಗೂ 15ನೇ ಹಣಕಾಸು ಯೋಜನೆಯಡಿ ಪ್ರತಿ ಗ್ರಾಮದ ಮನೆಗಳಿಗೆ ನಲ್ಲಿ ಸಂಪರ್ಕ ಇದೆ. ಬಹುಗ್ರಾಮ ಕುಡಿ ನೀರು ಯೋಜನೆಯಡಿ ನಲ್ಲಿ ಸಂಪರ್ಕ ಹಾಕಲಾಗಿದೆ. ಈಗ ಮತ್ತೆ ಜಲ ಜೀವನ್ ಮಿಷನ್ ಯೋಜನೆಯಡಿ ನಲ್ಲಿ ಇರುವವರಿಗೆ ಮತ್ತೆ ನಲ್ಲಿ ಅಳವಡಿಸುತ್ತಿದ್ದಾರೆ. ಹಾಗಾದರೆ ಎರಡೆರಡು ಪೈಪ್ ಲೈನ್ ಹಾಕಿದ್ದಾರಾ? ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುತ್ತಿರುವುದು ಸರಿಯೇ?" ಎಂದು ಪ್ರಶ್ನಿಸಿದರು.
"ಅಲ್ಲದೇ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಲ್ಲ. ಇಷ್ಟ ಬಂದ ಹಾಗೆ ಕಾಮಗಾರಿ ಮಾಡಲಾಗಿದೆ. ನಿಗದಿಗಿಂತ ಕಡಿಮೆ ವ್ಯಾಸದ ಪೈಪುಗಳನ್ನು ಅಳವಡಿಸಲಾಗಿದೆ. ಅವುಗಳ ಗುಣಮಟ್ಟವೂ ಕಡಿಮೆಯಿದೆ. ಇದಕ್ಕೆಲ್ಲ ಅನುಮೋದನೆ ನೀಡಿದವರ್ಯಾರು? ಎಸ್ಟಿಮೇಟ್ ಸಿದ್ಧಪಡಿಸಿದ್ಯಾರು? ಹಳೆಯ ಪೈಪ್‌ಲೈನ್ ಇದ್ದಾಗಲೂ ಹೊಸ ಪೈಪ್‌ಲೈನ್ ಮಾಡುವ ಅವಶ್ಯಕತೆ ಇತ್ತೇ? ಎಂಬೆಲ್ಲಾ ಪ್ರಶ್ನೆಗಳಿಗೆ ಲೋಕಾಯುಕ್ತ ತನಿಖೆಯಿಂದ ಉತ್ತರ ಸಿಗಬೇಕಿದೆ" ಎಂದರು.
ಇದನ್ನೂ ಓದಿ: ಕಲಬುರಗಿಯಲ್ಲಿ 'ಕಲ್ಯಾಣ ಕರ್ನಾಟಕ ಉತ್ಸವ'ಕ್ಕೆ ಹಸಿರು ನಿಶಾನೆ: ಫೆ 24 ರಿಂದ ಮೂರು ದಿನಗಳ ಐತಿಹಾಸಿಕ ಸಂಭ್ರಮ
ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಹಗರಣ.. "ಮಳವಳ್ಳಿ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಡೆದಿರುವ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ. ಹಲವೆಡೆ ಹಳೆಯ ಪೈಪ್‌ಲೈನ್‌ನೊಂದಿಗೆ ಹೊಸತು ಮಾಡಲಾಗಿದೆ. ಕೆಲವೆಡೆ ಹಳೆಯ ಪೈಪ್‌ಲೈನ್‌ಗೆ ಸಂಪರ್ಕ ನೀಡಿ, ಹೊಸದಾಗಿ ಪೈಪ್‌ಲೈನ್ ಮಾಡಲಾಗಿದೆ ಎಂದು ಬಿಲ್ ಮಾಡಿಕೊಳ್ಳಲಾಗಿದೆ. ಎಸ್.ಆರ್. ದರಕ್ಕಿಂತ ಹೆಚ್ಚು ಮೊತ್ತಕ್ಕೆ ಟೆಂಡರ್ ನೀಡಲಾಗಿದೆ. ಬಹುತೇಕ ಕಾಮಗಾರಿಗಳಲ್ಲಿ ಶೇ.75ರಷ್ಟು ಸಾಮಗ್ರಿ ವೆಚ್ಚವಾಗಿ ಬಿಲ್ ಮಾಡಲಾಗಿದೆ" ಎಂದು ಆರೋಪಿಸಿದರು.
"ಮಳವಳ್ಳಿ ತಾಲೂಕಿನಲ್ಲಿ ಕುದ್ರೋಳಿ ಬಿಲ್ಡರ್ಸ್ ಅಂಡ್ ಇನ್ಸ್ಟ್ರಕ್ಟರ್ ಪ್ರೈ.ಲಿ. ಅವರಿಗೆ 64 ಕೋಟಿ ವೆಚ್ಚದ ಕಾಮಗಾರಿ ನೀಡಲಾಗಿತ್ತು. ಅದನ್ನು ಅವರು ಅರ್ಧಕ್ಕೆ ನಿಲ್ಲಿಸಿದ್ದಾರೆ. ಆದರೆ ಸಪ್ಪೆ ಬಿಲ್ ಎಂದು ಅವರಿಗೆ 40 ಕೋಟಿ ರೂ. ಹಣ ನೀಡಲಾಗಿದೆ. ಈಗ ಅವರಿಂದ ಹೆಚ್ಚುವರಿ ನೀಡಿರುವ ಹಣವನ್ನು ಇನ್ನೂ ವಸೂಲು ಮಾಡಿಲ್ಲ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆ ದಿಕ್ಕು ತಪ್ಪಬಾರದು. ಜನರ ತೆರಿಗೆ ಹಣವೂ ಪೋಲಾಗಬಾರದು ಎಂಬುದಷ್ಟೇ ನನ್ನ ಉದ್ದೇಶ" ಎಂದು ತಿಳಿಸಿದರು. ಜೊತೆಗೆ ಶೀಘ್ರ ತನಿಖೆಗೆ ಆಗ್ರಹಿಸಿದರು. ಈ ವೇಳೆ, ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಹಾಜರಿದ್ದರು.
ಇದನ್ನೂ ಓದಿ: ಅಪಘಾತ ತಪ್ಪಿಸಲು ನಾಮಫಲಕ ಅಳವಡಿಕೆ: ಪಿಎಸ್ಐ,ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ