ಮಂಡ್ಯ : ಜಿಲ್ಲೆಯಲ್ಲಿ ನಡೆಯುತ್ತಿರುವ ಕಾವೇರಿ ನದಿ ನೀರಿನ ಹೋರಾಟಕ್ಕೆ ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಬೆಂಬಲ ನೀಡಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಇಂದು ರೈತ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿದ್ದ ಹೋರಾಟದಲ್ಲಿ ಪುಟ್ಟರಾಜು ಭಾಗಿಯಾದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ನನ್ನ ಜಿಲ್ಲೆಗೆ ಯಾವುದೇ ಹಂತದಲ್ಲಿ ಅನ್ಯಾಯವಾದರೂ ಕಾವೇರಿ ಹಿತರಕ್ಷಣಾ ಸಮಿತಿ ಹಾಗು ಈ ಹಿಂದೆ ದಿವಂಗತ ಜಿ.ಮಾದೇಗೌಡರ ನೇತೃತ್ವದಲ್ಲಿಯೂ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇವತ್ತು ಹೆಚ್ಚಿನ ಮಟ್ಟದಲ್ಲಿ ಹೋರಾಟ ಮಾಡುವಂತಹ ಕಾರ್ಯಕ್ರಮಗಳನ್ನು ರೈತ ಹಿತರಕ್ಷಣಾ ಸಮಿತಿ ವತಿಯಿಂದ ಮಾಡುತ್ತಿದ್ದೇವೆ. ಇದಕ್ಕೆ ನಮ್ಮ ಜೆಡಿಎಸ್ ಪಕ್ಷಕ್ಕೂ ಕೂಡ ಬದ್ದ. ಶನಿವಾರ ಪಕ್ಷದ ವತಿಯಿಂದ ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್‌ನಿಂದ ಡಿಸಿ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗು ಕೇಂದ್ರ ಸರ್ಕಾರದ ಕಣ್ಣು ತೆರೆಸುತ್ತೇವೆ. ನಮ್ಮ ರೈತರ ಕಷ್ಟಗಳನ್ನು ತಿಳಿಸುವ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದರು.
ಇಲ್ಲಿ ಯಾರ ಬಗ್ಗೆಯೂ ಕೂಡ ಲಘುವಾಗಿ ಮಾತನಾಡುವ ಪ್ರಶ್ನೆ ಇಲ್ಲ. ಈ ಹೋರಾಟವನ್ನು ಜನಪ್ರನಿಧಿಗಳೇ ಕೈಗೆತ್ತಿಕೊಳ್ಳಬೇಕು. ಮೊದಲನಿಂದಲೂ ಈ ಪದ್ಧತಿ ಮಂಡ್ಯ ಜಿಲ್ಲೆಯಲ್ಲಿ ನಡೆದುಕೊಂಡು ಬಂದಿದೆ. ಹೀಗಾಗಿ ಎಲ್ಲ ನಾಯಕರು ಮುಂಬರುವ ದಿನಗಳಲ್ಲಾದರೂ ರೈತರ ಪರ ನಿಂತು ಹೋರಾಟ ಮಾಡುವ ಕೆಲಸವಾಗಬೇಕು ಎಂದು ಪುಟ್ಟರಾಜು ಒತ್ತಾಯಿಸಿದರು.
ಇದನ್ನೂ ಓದಿ : 'ಕುಮಾರಸ್ವಾಮಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದು ಯಾರು?' ಸಿದ್ದರಾಮಯ್ಯ ವಿರುದ್ಧ ಜಿ.ಟಿ.ದೇವೇಗೌಡ ವಾಕ್ಸಮರ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಗ್ಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರ ಆರೋಗ್ಯ ತುಂಬ ಸ್ಥಿರವಾಗಿದೆ. ಇವತ್ತು ಡಿಸ್ಚಾರ್ಜ್ ಆಗುತ್ತಿದ್ದಾರೆ ಎಂದರು. ಪುಟ್ಟರಾಜು ಪಕ್ಷ ತ್ಯಜಿಸಿ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿಗೆ, ನಮ್ಮ ಮುಂದೆ ಇರೋದು ಕಾವೇರಿ ಹೋರಾಟ. ನಮ್ಮ ಜನರಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳಬೇಕು. ಜೆಡಿಎಸ್‌ನಲ್ಲಿ ಸಕ್ರಿಯವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಊಹಾಪೋಹಗಳಿಗೆ ಒತ್ತು ಕೊಡಬೇಡಿ ಎಂದು ತಿಳಿಸಿದರು.
ಕೃಪೇಂದ್ರ ರೆಡ್ಡಿ, ನಾವು ಕಳೆದ ಮೂರು ದಿನಗಳಿಂದ ಕೊಡಗಿನಲ್ಲಿದ್ದೆವು. ನನ್ನ ನಾಡಿನ, ಜಿಲ್ಲೆಯ ಜನರಿಗೆ ಒಳ್ಳೆದಾಗಲಿ ಎಂದು ಅಲ್ಲಿನ ಆರಾಧ್ಯ ದೈವವನ್ನು ಪೂಜೆ ಮಾಡಿ ಬಂದಿದ್ದೇನೆ. ಪಕ್ಷ ಬಿಡುವ ಯಾವುದೇ ಬೆಳವಣಿಗೆ ಇಲ್ಲ. ನಮಗೆ ಯಾವುದೇ ಅಸಮಾಧಾನ ಇಲ್ಲ. ಒಗ್ಗಟ್ಟಾಗಿ ಕೆಲಸ ಮಾಡ್ತಿದ್ದೇವೆ ಎಂದು ಪುಟ್ಟರಾಜು ಸ್ಪಷ್ಟನೆ ನೀಡಿದರು.
ಬಾರುಕೋಲು ಹಿಡಿದು ಪ್ರತಿಭಟನೆ: ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ನೇತೃತ್ವದಲ್ಲಿ ಭೂಮಿತಾಯಿ ಹೋರಾಟ ಸಮಿತಿಯಿಂದ ವಿನೂತನವಾಗಿ ಬಾರುಕೋಲು ಹಿಡಿದು ಪ್ರತಿಭಟನೆ ನಡೆಸಲಾಯ್ತು.
ಇದನ್ನೂ ಓದಿ : ಆಸ್ಪತ್ರೆಯಿಂದಲೇ 'ಕಾವೇರಿ ಹೋರಾಟ'ಕ್ಕೆ ಕರೆ ನೀಡಿದ ಮಾಜಿ ಸಿಎಂ ಹೆಚ್ಡಿಕೆ