ಮಂಡ್ಯ: ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಪ್ರತಿಯೊಂದು ಗ್ರಾಮಗಳಲ್ಲೂ ಆರತಿ ಮಾಡಿ ಸ್ವಾಗತ ಕೋರುತ್ತಿರುವುದು ವಿಶೇಷವಾಗಿದೆ.
ಕ್ಷೇತ್ರಕ್ಕೆ ಆಗಮಿಸಿದ ಸಿದ್ದರಾಮಯ್ಯ, ನಗರೂರಿನ ಮರಡಿ ಲಿಂಗೇಶ್ವರ ದೇವಾಲಯದಲ್ಲಿ ಪೂಜೆ ನೆರವೇರಿಸಿದರು. ಪೂಜೆ ನಂತರ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚಿಸಿದರು. ಇನ್ನು ಕಿಕ್ಕೇರಿಗೆ ಹೋದ ಸಿದ್ದರಾಮಯ್ಯಗೆ ಬೃಹತ್ ಸೇಬಿನ ಹಾರವನ್ನು ಕ್ರೇನ್ ಮೂಲಕ ಹಾಕಿ ಸ್ವಾಗತಿಸಲಾಯಿತು. ದಾರಿಯುದ್ದಕ್ಕೂ ಕಾರಿನಲ್ಲೇ ನಿಂತು ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಸೇಬಿಗಾಗಿ ಪ್ರಚಾರ ಕಾರ್ಯಕ್ಕೆ ಬಂದ ಜನತೆ ಕಿತ್ತಾಡಿದ ಘಟನೆ ನಡೆಯಿತು.
ಕ್ಷೇತ್ರದ 4 ಹೋಬಳಿ ಭಾಗದಲ್ಲಿ ಚುನಾವಣಾ ಪ್ರಚಾರ ಮಾಡಲಾಗುತ್ತಿದ್ದು, ಸಿದ್ದರಾಮಯ್ಯಗೆ ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಾಥ್ ನೀಡಿದ್ದಾರೆ.