ಮಂಡ್ಯ : ಒಂದು ವಾರದಿಂದ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ಅಹೋರಾತ್ರಿ ಧರಣಿ ಮಾಡಲಾಗುತ್ತಿತ್ತು. ರಾಜ್ಯ ಸರ್ಕಾರ ನೀರು ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಮುತ್ತಿಗೆ ಹಾಕಲು ರೈತರು ಯತ್ನಿಸಿದರು. ಈ ವೇಳೆ ಪೊಲೀಸರು ರೈತರನ್ನು ವಶಕ್ಕೆ ಪಡೆದಿದ್ದಾರೆ.
ಕಬ್ಬಿನ ಬೆಳೆ ರಕ್ಷಣೆಗಾಗಿ ನೀರು ಬಿಡುವಂತೆ ಒತ್ತಾಯಿಸಿ ಜಿಲ್ಲೆಯ ರೈತರು ಕೆಆರ್ಎಸ್ ಬಳಿ ಪ್ರತಿಭಟನೆ ನಡೆಸಿದರು. ಅಣೆಕಟ್ಟೆಯ ದಕ್ಷಿಣ ದ್ವಾರದಲ್ಲಿ ಧರಣಿ ಮಾಡಿದ ರೈತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಮಂಡ್ಯದಿಂದ ಕೆಆರ್ಎಸ್ವರೆಗೂ ಬೈಕ್ ರ‍್ಯಾಲಿ ಮಾಡಿದರು. ದಾರಿಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಧರಣಿ ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿದ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ರಾಮಕೃಷ್ಣ, ನೀರು ಬಿಡದಿರುವ ನಿರ್ಧಾರ ತಿಳಿಸಿದರು. ಇದರಿಂದ ಆಕ್ರೋಶಗೊಂಡ ರೈತ ಸಂಘದ ಮುಖಂಡರು ಬ್ಯಾರಿಕೇಡ್ ಬೇಧಿಸಿ ಒಳ ನುಗ್ಗಲು ಯತ್ನಿಸುತ್ತಿದ್ದಂತೆ ವಶಕ್ಕೆ ಪಡೆಯಲಾಯಿತು.