ಮಂಡ್ಯ: ಪಾಂಡವಪುರ ತಾಲೂಕಿನ ಬೇಬಿಬೆಟ್ಟದ ಸರ್ವೇ ನಂ.1ರ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿದ್ದ ಸ್ಫೋಟಕ ವಸ್ತುಗಳನ್ನು ಟಾಸ್ಕ್ ಫೋರ್ಸ್ ತಂಡ ಹಾಗೂ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೇಬಿಬೆಟ್ಟದ ಸರ್ವೇ ನಂ.1ರಲ್ಲಿನ ಬಂಡೆಯೊಂದರ ಬಳಿ ಬಿದ್ದಿದ್ದ 23 ಜಿಲೆಟಿನ್ ಟ್ಯೂಬ್‌ಗಳು, 7 ಪ್ಲಾಸ್ಟಿಕ್ ಟ್ಯೂಬ್‌ಗಳು, 10 ಡಿಟೋನೇಟರ್‌ಗಳು ಹಾಗೂ ಡಿಟೋನೇಟರ್‌ನ ತಂತಿಗಳನ್ನು ಸ್ಥಳೀಯರ ಸಹಕಾರದಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಪತ್ತೆಯಾದ ಸ್ಫೋಟಕಗಳನ್ನು ಮೆಗ್ಗರ್ ಬ್ಲಾಸ್ಟ್‌ಗೆ ಬಳಸಲಾಗುತ್ತಿತ್ತು ಎನ್ನಲಾಗ್ತಿದೆ. ಈ ಸ್ಫೋಟಕಗಳನ್ನು ಕಲ್ಲು ಗಣಿಗಾರಿಕೆಗಾಗಿ ಎಲ್ಲಿಂದಲೋ ತಂದು, ಇಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ದಿನಗಳಿಂದಲೂ ಸ್ಫೋಟಕಗಳ ಪತ್ತೆಗಾಗಿ ಟಾಸ್ಕ್ ಫೋರ್ಸ್ ತಂಡ ಹಾಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಸದ್ಯ ಸ್ಥಳೀಯರ ಸಹಕಾರದಿಂದ ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದಾರೆ. ಕಳೆದ ಶುಕ್ರವಾರ ಕೆಲವರು ಸ್ಫೋಟಕಗಳು ಬಿದ್ದಿರುವುದನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು.
ಪ್ರಕರಣ ದಾಖಲಿಸಿದ ಪಟ್ಟಣ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಟಾಸ್ಕ್ ಫೋರ್ಸ್ ಅಧಿಕಾರಿಗಳಾದ ಆದರ್ಶ್, ಶಂಕರ್, ಸಿಪಿಐ ಕೆ.ಪ್ರಭಾಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಪರೀಕ್ಷೆಗೆ ಹೆದರಿ ಮನೆಯಲ್ಲೇ ಕುಳಿತಿದ್ದ ಬಾಲಕಿ.. ವಿದ್ಯಾರ್ಥಿನಿಯ ಮನವೊಲಿಸಿ SSLC Exam ಬರೆಸಿದ ಬಿಇಒ