ಮಂಡ್ಯ: ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ಅತೃಪ್ತರ ವಿರುದ್ಧ ಸೇಡು ತೀರಿಸಿಕೊಳ್ಳಲು ಎರಡೂ ಪಕ್ಷದ ನಾಯಕರು ಮುಂದಾಗಿದ್ದಾರೆ. ನಾಳೆ ಕೆ ಆರ್ ಪೇಟೆಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡುತ್ತಿರುವುದಕ್ಕೂ ಇದೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೆಆರ್ ಪೇಟೆ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಕೆ ಸಿ ನಾರಾಯಣಗೌಡ ಅತೃಪ್ತರ ಜತೆ ನಿಂತು ಸರ್ಕಾರ ಉರುಳಲು ಕಾರಣರಾದರು. ಅವರಿಗೆ ಪಾಠ ಕಲಿಸಲು ಖುದ್ದು ಮಾಜಿ ಸಿಎಂ ಅಖಾಡಕ್ಕೆ ಧುಮುಕುತ್ತಿದ್ದು, ಕೆ ಆರ್ ಪೇಟೆಯಲ್ಲಿ ಬೇರೊಬ್ಬ ಅಭ್ಯರ್ಥಿ ಆಯ್ಕೆಗೆ ಮುಂದಾಗಿದ್ದಾರೆ. ಈ ಸಂಬಂಧ ನಾಳೆ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಜತೆ ಸಭೆ ನಡೆಸಿ, ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಲಿದ್ದು, ಕುಮಾರಸ್ವಾಮಿ ಅವರು ಸಭೆಯ ನೇತೃತ್ವ ವಹಿಸಲಿದ್ದಾರೆ. ಮುಂಬರುವ ಉಪ ಚುನಾವಣೆಗೆ ಯಾರನ್ನು ಕಣಕ್ಕಿಳಿಸಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗ್ತಿದ್ದು, ಸಭೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ನಿಖಿಲ್ ಹೆಸರು ಮುನ್ನಲೆಗೆ..
ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಜೆಡಿಎಸ್ ಅಭ್ಯರ್ಥಿಗಳ ಸಾಲಿನಲ್ಲಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೆಸರು ಕೇಳಿ ಬರುತ್ತಿದೆ. ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಮಾಡಬೇಕೆಂದು ಕಾರ್ಯಕರ್ತರು ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿಯೇ ಕುಮಾರಸ್ವಾಮಿ ಭೇಟಿ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ನಿಖಿಲ್ ಅಭಿಮಾನಿಗಳು ಈಗಾಗಲೇ ಸೋಶಿಯಲ್ ಮೀಡಿಯಾ ಮೂಲಕ ಸರ್ವೇ ನಡೆಸಿ, ಅವರು ಸ್ಪರ್ಧಿಸಿದರೆ ಕ್ಷೇತ್ರದ ಜನರ ಅಭಿಪ್ರಾಯ ಹೇಗಿರಲಿದೆ ಎಂಬ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಲೋಕ ಸಮರದಲ್ಲಿ ಆದ ಮುಖಭಂಗ ಮತ್ತೆ ಆಗದಂತೆ ಎಚ್ಚರಿಕೆ ವಹಿಸಲುಈ ಸರ್ವೇ ನಡೆಸುವ ನಿರ್ಧಾರ ಮಾಡಲಾಗಿದೆ. ಒಂದೊಮ್ಮೆ ನಿಖಿಲ್ ಸ್ಪರ್ಧೆ ಮಾಡಿದರೆ ಮತ್ತೆ ಸ್ವಾಭಿಮಾನದ ಪ್ರಶ‍್ನೆ ಎದ್ದರೆ ಕ್ಷೇತ್ರದ ಮತದಾರರ ಅಂತರಾಳ ಹೇಗಿರುತ್ತೆ ಎಂಬ ಚರ್ಚೆಯೂ ನಡೆಯುತ್ತಿದೆ ಎನ್ನಲಾಗಿದೆ.