ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ನನ್ನನ್ನು ಮುಟ್ಟಿದರೆ ಸಮ್ಮನೆ ಇರಲ್ಲ" ಎಂದು ಮುಖ್ಯಮಂತ್ರಿ ಆಗಲು ಬಯಸುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸಂದೇಶ ನೀಡಿದ್ದಾರೆ, ಆದು ಬಿಟ್ಟರೆ ಬೇರಯವರಿಗೆ ಅಲ್ಲ" ಎಂದು ಮೈಸೂರಿನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇಂದು ಚಾಮುಂಡಿ ಬೆಟ್ಟಕ್ಕೆ ಅಗಮಿಸಿದ ಯತ್ನಾಳ್ ಹಾಗೂ ರಮೇಶ್ ಜಾರಕಿಹೋಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ಚಾಮುಂಡಿ ತಾಯಿಯ ದರ್ಶನ ಪಡೆದರು. ಬಳಿಕ ಯತ್ನಾಳ್ ಮಾಧ್ಯಮಗಳ ಜೊತೆ ಮಾತನಾಡಿ, "ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ವಿಚಾರದಲ್ಲಿ ಮುಖ್ಯಮಂತ್ರಿ ದಾಖಲೆ ಇಟ್ಟುಕೊಂಡು ಜವಾಬ್ದಾರಿಯುತವಾಗಿ ಮಾತನಾಡಬೇಕು. ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಬಂದವರು ಯಾರು ಎಂಬ ವಿಚಾರದಲ್ಲಿ ದಾಖಲೆ ಕೊಟ್ಟು ಮಾತನಾಡಲಿ. ಅದು ಬಿಟ್ಟು ಸುಮ್ಮನೆ ಹೇಳಬಾರದು" ಎಂದರು.
ಇನ್ನು ಗಂಡು ಮಕ್ಕಳಿಗೂ ಫ್ರೀ ಬಸ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯಾತ್ನಳ್ "ಇನ್ನೂ ಸ್ವಲ್ಪ ದಿನ ಕಾಯಿರಿ, ಈಗಾಗಲೇ ಸರ್ಕಾರಿ ನೌಕರರಿಗೂ ಸಂಬಳ ಕೊಡಲು ದುಡ್ಡು ಇಲ್ಲ, ಸ್ವಲ್ಪ ದಿವಸದಲ್ಲಿ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ. ಈಗಾಗಲೇ ಸರ್ಕಾರಿ ಬಸ್ಗಳಿಗೂ ಟೈರ್ ಇಲ್ಲ. ಡಿ.ಕೆ.ಶಿವಕುಮಾರ್ ತಮ್ಮ ಮನೆಯಿಂದ ಡೀಸಲ್ ತಂದು ಹಾಕುತ್ತಾರಾ?" ಎಂದು ಪ್ರಶ್ನಿಸಿದ ಯತ್ನಾಳ್, "ಗಂಡು ಮಕ್ಕಳಿಗೆ ಉಚಿತ ಬಸ್ ಪ್ರಯಾಣ ಪ್ರಸ್ತಾವ ಸರಿಯಲ್ಲ" ಎಂದರು.
ವಕ್ಫ್ ಬಗ್ಗೆ ಕಾನೂನಿನ ಜಾಗೃತಿ ಅಭಿಯಾನ: "ವಕ್ಫ್ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲು ನವಂಬರ್ 25 ರಿಂದ ಡಿಸೆಂಬರ್ 25ರವರೆಗೆ ಬೀದರ್ನಿಂದ ಚಾಮರಾಜನಗರದವರೆಗೂ ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ. ನಾನು, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಅರವಿಂದ್ ನಿಂಬಾವಳಿ, ಜಿ.ಎಮ್. ಸಿದ್ದೇಶ್, ಚಂದ್ರಪ್ಪ, ಬಿ.ಪಿ ಹರೀಶ್, ಹನ್ನೊಂದು ಜನರ ತಂಡ ಮಾಡಿಕೊಂಡಿದ್ದೇವೆ. ಇದರಲ್ಲಿ 11 ಸದಸ್ಯರು ಇದ್ದಾರೆ. ಇದರ ಸಮಾರೋಪ ಬೆಂಗಳೂರಿನಲ್ಲಿ ಆಗುತ್ತದೆ. ಅದಕ್ಕಾಗಿ ತಾಯಿ ಚಾಮುಂಡಿ ದರ್ಶನ ಪಡೆಯಲು ಬಂದಿದ್ದೇವೆ" ಎಂದರು.
"ಇದು ಭಾರತೀಯ ಜನತಾ ಪಾರ್ಟಿಯಿಂದಲೇ ಮಾಡುತ್ತಿದ್ದೇವೆ. ಈ ಜಾಗೃತಿ ಕಾರ್ಯಕ್ರಮಕ್ಕೆ ಯಾವ ಪಕ್ಷದವರು ಬೇಕಾದರೂ ಸೇರಬಹುದು. ಇದು ಮುಡಾಕ್ಕಿಂತ ದೊಡ್ಡ ಹೋರಾಟ. ಯಾರಿಗೆ ನಮ್ಮ ಸಂಸ್ಕೃತಿ, ದೇಶ ಬೇಕೋ ಅವರು ಬರುತ್ತಾರೆ" ಎಂದರು.
ಇದನ್ನೂ ಓದಿ: ವಕ್ಫ್ ಬೋರ್ಡ್ನಿಂದ ರೈತರ ಜಮೀನಿಗೆ ನೋಟಿಸ್ ಆರೋಪ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ