ಮಂಡ್ಯ: ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಪರ ಮತಬೇಟೆ ಆರಂಭಿಸಿದ್ದು, ಗೆಜ್ಜಲೆಕೆರೆಯಲ್ಲಿ ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ರೋಡ್ ಶೋಗೆ ಚಾಲನೆ ನೀಡಿದರು.
ಇನ್ನು ನಿಖಿಲ್ ಕುಮಾರಸ್ವಾಮಿ ಮಂಡ್ಯ ವಿಧಾನಸಭಾ ಕ್ಷೇತ್ರದ ಹನಕೆರೆಯಿಂದ ಪ್ರಚಾರ ಶುರು ಮಾಡಿದ್ದು, ಅವರಿಗೆ ಶಾಸಕ ಎಂ. ಶ್ರೀನಿವಾಸ್ ಸಾಥ್ ನೀಡಿದರು. ಗ್ರಾಮಕ್ಕೆ ಬಂದ ನಿಖಿಲ್‌ಗೆ ಅಭಿಮಾನಿಗಳು ಹಾಗೂ ಕಲಾ ತಂಡಗಳು ಮೆರವಣಿಗೆಯ ಮೂಲಕ ಭವ್ಯ ಸ್ವಾಗತ ಕೋರಿದರು.
ಪ್ರಚಾರದ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸಂದೇಶ್ ನಾಗರಾಜ್ ನಮ್ಮಿಂದ ರಾಜಕೀಯ ಜನ್ಮ ಪಡೆದ್ರು. ಒಂದು ಚುನಾವಣೆ ಗೆಲ್ಲದ ಅವ್ರನ್ನ ಗೆಲ್ಲಿಸಿದ್ದು ನಾವು. ಈಗ ನಮ್ಮ ವಿರುದ್ದವೇ ತಿರುಗಿಬಿದ್ದಿದ್ದಾರೆ. ಚುನಾವಣೆ ಗೆಲ್ಲಲು ಸುಮಲತಾ ಹೊಸ ಪ್ಲಾನ್ ಮಾಡಿದ್ದಾರೆ. ಪ್ರಚಾರ ಸಭೆಯಲ್ಲಿ ಅವರೇ ಕಲ್ಲೆಸೆದುಕೊಂಡು ಜೆಡಿಎಸ್ ವಿರುದ್ದ ಗೂಬೆ ಕೂರಿಸಲು ಪ್ಲಾನ್ ಮಾಡಿದ್ದಾರೆ. ನಾವು ಇಂತಹ ಕುತಂತ್ರ ಮಾಡಲ್ಲ ಎಂದರು. ಅಷ್ಟೇ ಅಲ್ಲದೆ, ಬಿಜೆಪಿ ಜೊತೆ ಸೇರಿಕೊಂಡು ಚುನಾವಣೆಯಲ್ಲಿ ಮತ ಕೇಳಲು ಬಂದಿದ್ದಾರೆ. 200 ರೈತರು ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ನಿಮ್ಮ ಬೆಂಬಲಕ್ಕೆ ಯಾರು ಬಂದ್ರು ಅಂತ ನೀವೇ ನೋಡಿ ಎಂದು ಹೇಳಿದರು.
ಇದಕ್ಕೂ ಮೊದಲು ನಗರದ ಖಾಸಗಿ ಹೋಟೆಲ್‌ನಲ್ಲಿ ಗ್ರಾಮಾಂತರ ವಿದ್ಯುತ್ ನಿರ್ವಾಹಕರ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕುಮಾರಸ್ವಾಮಿ, ಚುನಾವಣೆ ಇರುವ ಕಾರಣ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದ್ರು.