ಮಂಡ್ಯ: ಆಡಳಿತವನ್ನು ಜನರ ಬಳಿಗೆ ಕೊಂಡೊಯ್ದು ಅವರ ಸಮಸ್ಯೆಗಳನ್ನು ತಳ ಮಟ್ಟದಿಂದಲೇ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳು ಕೆ.ಆರ್. ಪೇಟೆ ತಾಲೂಕಿನ ಶೀಳನೆರೆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಜಿಲ್ಲಾಧಿಕಾರಿ ಎಸ್. ಅಶ್ವಥಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗ್ರಾಮ ವಾಸ್ತವ್ಯ ಕುರಿತು ಮಾತನಾಡಿದ ಅವರು, ಕಂದಾಯ ಸಚಿವರ ನಿರ್ದೇಶನದಂತೆ ಪ್ರತಿ ತಿಂಗಳ ಮೂರನೇ ಶನಿವಾರದಂದು ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ ನೀಡಬೇಕಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಎಂಬ ನೂತನ ಕಾರ್ಯಕ್ರಮವು ಫೆಬ್ರವರಿ ಮೂರನೇ ಶನಿವಾರದಿಂದ ರಾಜ್ಯಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿದ್ದು, ಫೆಬ್ರವರಿ 19 ರಂದು ಸೀಳನಗೆರೆ ಗ್ರಾಮಕ್ಕೆ ಸಂಜೆ 5:30ಕ್ಕೆ ಆಗಮಿಸಿ, ಸಂಜೆ 7ರಿಂದ ರಾತ್ರಿ 7:30 ರ ವರೆಗೆ ಅರಳಿಕಟ್ಟೆ ಹರಟೆ ಗ್ರಾಮದ ಮುಖಂಡರೊಂದಿಗೆ ಚರ್ಚೆ, ಸಂವಾದ ನಡೆಸುತ್ತೇವೆ ಎಂದರು.
ಫೆಬ್ರವರಿ 20 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ "ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಉದ್ಘಾಟನೆ ಇರುತ್ತದೆ. ನಂತರದಲ್ಲಿ ವಿವಿಧ ಇಲಾಖೆಗಳಿಂದ ಸರ್ಕಾರವು ನೀಡುತ್ತಿರುವ ಸವಲತ್ತು ಮತ್ತು ಯೋಜನೆಗಳ ಪರಿಚಯ ಮಾಡಲಾಗುವುದು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಮಕ್ಕಳ ಜೊತೆ ಸಂವಾದ, ಗ್ರಾಮದ ರೈತರೊಂದಿಗೆ, ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮವಿರುತ್ತದೆ ಎಂದರು.