ಮಂಡ್ಯ: ಕೊರಾನಾ ವೈರಸ್ ದೇವಾಲಯಗಳ ಆದಾಯಕ್ಕೂ ಕೊಕ್ಕೆ ಹಾಕಿದೆ. ಶ್ರೀರಂಗಪಟ್ಟಣದ ಎರಡು ಪ್ರಸಿದ್ಧ ದೇವಾಲಯಗಳ ಆದಾಯದಲ್ಲಿ ಸುಮಾರು 20 ಲಕ್ಷ ರೂಪಾಯಿಯಷ್ಟು ನಷ್ಟವಾಗಿದೆ.
ಶಕ್ತಿ ದೇವತೆ ನಿಮಿಷಾಂಭ ದೇವಾಲಯಕ್ಕೆ ವಾರಪೂರ್ತಿ ಭಕ್ತರ ದಂಡು ಹರಿದು ಬರುತ್ತಿತ್ತು. ಈಗ ದೇವಾಲಯದ ಬಾಗಿಲು ಬಂದ್ ಮಾಡಿದ್ದು, ಭಕ್ತರ ಪ್ರವೇಶವಿಲ್ಲದೆ ಪೂಜೆ ಮಾತ್ರ ನಡೆಯುತ್ತಿದೆ. ಇನ್ನು ಭಕ್ತರು ಹರಕೆಯ ರೂಪದಲ್ಲಿ ಸೀರೆಯನ್ನು ಸಲ್ಲಿಸುತ್ತಿದ್ದು, ಈ ಸೀರೆ ಹರಾಜು ಸೇರಿದಂತೆ ಹುಂಡಿಯ ತಿಂಗಳ ಆದಾಯ ಸರಾಸರಿ 12 ಲಕ್ಷ ರೂಪಾಯಿ ಇತ್ತು. ಆದರೆ ಎರಡು ತಿಂಗಳಿಂದ ಭಕ್ತರ ಕಾಣಿಕೆ ಇಲ್ಲವಾಗಿದೆ.
ಇನ್ನು ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯಕ್ಕೂ ಆದಾಯದ ಮೂಲ ನಿಂತು ಹೋಗಿದೆ. ತಿಂಗಳಿಗೆ ಸರಾಸರಿಯಾಗಿ 8 ಲಕ್ಷ ರೂಪಾಯಿ ಇತ್ತು ಎಂದು ಹೇಳಲಾಗಿದೆ. ಅಂದರೆ ವಾರ್ಷಿಕ ಎರಡೂ ದೇವಾಲಯಗಳಿಂದ 4 ರಿಂದ 8 ಕೋಟಿ ವರೆಗೂ ಆದಾಯವಿದೆ. ಇದರ ಜೊತೆಗೆ ದೇವಾಲಯದ ವಾಣಿಜ್ಯ ಮಳಿಗೆಯಿಂದಲೂ ಬಾಡಿಗೆ ನಿಂತು ಹೋಗಿದ್ದು, ಸಾಕಷ್ಟು ನಷ್ಟ ಉಂಟಾಗಿದೆ.
ಹೀಗಾಗಿ ಆದಾಯ ನಿಂತು ಹೋಗಿರುವುದರಿಂದ ಇಲ್ಲಿನ ಭಕ್ತರು ದೇವಾಲಯ ತೆರೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ದೇವಿಗೆ ಪೂಜೆ ಸಲ್ಲಿಸಿದರೆ ಕೊರೊನಾ ನಿವಾರಣೆಯಾಗುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.