ಮಂಡ್ಯ: ಬೆಳಗ್ಗೆ 4 ಪ್ರಕರಣಗಳು ದೃಢವಾಗಿದ್ದ ಜಿಲ್ಲೆಯಲ್ಲಿ ಸಂಜೆ ವೇಳೆಗೆ ಮತ್ತೊಂದು ಕೊರೊನಾ ಪ್ರಕರಣ ಪತ್ತೆಯಾಗಿದೆ. ಇಂದು ಒಟ್ಟು 5 ಸೋಂಕಿತರು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
ಸಂಜೆ ಪತ್ತೆಯಾದ ರೋಗಿಗೆ ಪಿ-179ರ ಸಂಪರ್ಕದಿಂದ ಕೊರೊನಾ ಸೋಂಕು ಹರಡಿದೆ. ಸೋಂಕಿತ ಮಳವಳ್ಳಿಯ ನಿವಾಸಿ ಎಂದು ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಮುಂಬೈ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೆ.ಆರ್.ಪೇಟೆ ಹಾಗೂ ನಾಗಮಂಗಲದಲ್ಲಿ ಆತಂಕ ಶುರುವಾಗಿದೆ. ಈಗಾಗಲೇ 200ಕ್ಕೂ ಹೆಚ್ಚು ಮಂದಿ ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.
ಮೂರು ಬಾರಿ ಪರೀಕ್ಷೆ: ರೋಗಿ ಪಿ-982, ರೋಗಿಗಳಾದ ಪಿ-179, ಪಿ-237, ಪಿ-238, ಪಿ-239 ಮತ್ತು ಪಿ-454ರ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬಂದಿದೆ. ಮೊದಲ ಬಾರಿ ಅಂದರೆ ಏಪ್ರಿಲ್ 11ರಂದು ಪರೀಕ್ಷೆ ಮಾಡಿದ್ದಾಗ ವರದಿ ನೆಗೆಟಿವ್ ಬಂದಿತ್ತು. ನಂತರ ಏಪ್ರಿಲ್ 29ರಂದೂ ನೆಗೆಟಿವ್ ವರದಿ ಬಂದಿತ್ತು. ಆದರೆ ಮೇ 12ರಂದು ಮನೆ ಮನೆ ಸಮೀಕ್ಷೆ ನಡೆಸುವಾಗ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ.
ಈತ ಪಿ-179ರ ಸಹೋದರನಾಗಿದ್ದು, ಮೊದಲ ಮನೆ ಸಮೀಕ್ಷೆ ವೇಳೆ ಅಚ್ಚರಿ ಎಂಬಂತೆ ವರದಿ ಪಾಸಿಟಿವ್ ಬಂದಿದೆ. ಇದರಿಂದ ಮಳವಳ್ಳಿಯಲ್ಲಿ ಆತಂಕ ಶುರುವಾಗಿದೆ. ತಿಂಗಳ ನಂತರ ಪಿ-982ಕ್ಕೆ ಕೊರೊನಾ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.