ಮಂಡ್ಯ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಲೇ ಇದೆ. ಇಂದು ಬೆಳಗಿನ ಆರೋಗ್ಯ ಇಲಾಖೆ ವರದಿಯಲ್ಲಿ 17 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.
ಇವತ್ತಿನ ಹೆಲ್ತ್ ಬುಲೆಟಿನ್ನಲ್ಲಿ ಕೊರೊನಾ ದೃಢಪಟ್ಟಿರುವ ಎಲ್ಲಾ ಸೋಂಕಿತರು ಮುಂಬೈನಿಂದ ಬಂದವರೇ ಆಗಿದ್ದಾರೆ. ಇಂದು ಪತ್ತೆಯಾದ ಹೊಸ ಪ್ರಕರಣಗಳಲ್ಲಿ 5 ಮಂದಿ ಮಹಿಳೆಯರು, 6 ಮಂದಿ ಪುರುಷರು ಹಾಗೂ 6 ಮಂದಿ ಮಕ್ಕಳಿದ್ದಾರೆ. ಎಲ್ಲರಿಗೂ ಮಂಡ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈನಿಂದ ಬಂದಿದ್ದ ಇವರನ್ನು ನೇರವಾಗಿ ಕ್ವಾರಂಟೈನ್ ಮಾಡಲಾಗಿತ್ತು.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 89 ಪ್ರಕರಣಗಳು ದಾಖಲಾಗಿದ್ದು, 19 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.