ಮಂಡ್ಯ: ಮಂಡ್ಯ ಜಿಲ್ಲೆಯನ್ನು ರಾಜಕೀಯವಾಗಿ ಪ್ರಬುದ್ಧ ಕ್ಷೇತ್ರ ಅಂತಲೇ ಹೇಳಲಾಗುತ್ತೆ. ಜಾತಿ ಲೆಕ್ಕಚಾರ ಹಾಕಿ, ಸಮೀಕ್ಷೆ ಮಾಡಿದರೂ ಅದು ಇಲ್ಲಿ ತಲೆಕೆಳಗಾದ ಉದಾಹರಣೆಗಳಿವೆ. ಇಷ್ಟೊಂದು ಪ್ರಬುದ್ಧವಾದ ಫಲಿತಾಂಶ ನೀಡಿದರೂ ಸಮಸ್ಯೆಗಳ ಸರಮಾಲೆಯೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿದೆ.
ಹೌದು, ಇಲ್ಲಿ ರಾತ್ರೋರಾತ್ರಿ ಮತದಾರರನ್ನು ಸೆಳೆಯೋದು ಕಷ್ಟ. ಭರವಸೆಗಳನ್ನು ನೀಡಿ ಮುಂದೆ ಈಡೇರಿಸದಿದ್ದರೆ ಅದಕ್ಕೆ ಮತ್ತೊಂದು ಚುನಾವಣೆಯಲ್ಲಿ ರಾಜಕೀಯ ನಾಯಕರಿಗೆ ತಕ್ಕ ಪಾಠ ಕಲಿಸುವ ಮತದಾರರು ಇಲ್ಲಿದ್ದಾರೆ. ಇದೇ ಕಾರಣಕ್ಕೆ ಇಲ್ಲಿನ ರಣಕಣ ದೇಶದ ಗಮನ ಸೆಳೆಯುತ್ತೆ. ಆದ್ರೆ ಇಂತಹ ಪ್ರಬುದ್ಧ ಮತದಾರರು ಇರುವ ಕ್ಷೇತ್ರ ಸಮಸ್ಯೆಗಳಿಂದ ಮುಕ್ತವಾಗಿಲ್ಲ.
ಇಡೀ ರಾಷ್ಟ್ರದಲ್ಲೇ ಗಮನ ಸೆಳೆದ ಕ್ಷೇತ್ರ ಮಂಡ್ಯ. ಇದಕ್ಕೆ ಕಾರಣ ಸಿಎಂ ಕುಮಾರಸ್ವಾಮಿ ಪುತ್ರನ ಸ್ಪರ್ಧೆ ಹಾಗೂ ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೋದು. ಇಲ್ಲಿ ಸಿಎಂ ವರ್ಚಸ್ ಮತ್ತು ಅಂಬಿ ಅಭಿಮಾನದ ನಡುವೆ ಹೋರಾಟ ಶುರುವಾಗಿದೆ.
ಈ ಕ್ಷೇತ್ರದಲ್ಲಿ 8,42,017 ಪುರುಷ ಮತದಾರರು, 8,39,519 ಮಹಿಳಾ ಮತದಾರರಿದ್ದಾರೆ. ಇತರೆ 142 ಮತದಾರರು, ಸೇವಾ ಮತದಾರರು 717 ಮಂದಿ ಇದ್ದಾರೆ. ಒಟ್ಟಾರೆಯಾಗಿ ಕ್ಷೇತ್ರದಾದ್ಯಂತ 16,81,678 ಮತದಾರರು ಇದ್ದು, ಅಭ್ಯರ್ಥಿಗಳ ರಾಜಕೀಯ ಹಣೆಬರಹ ಬರೆಯಲಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿ :
ಮಂಡ್ಯ ಲೋಕಸಭೆಗೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಸೇರಲಿವೆ.
ಮಂಡ್ಯ ಕ್ಷೇತ್ರದ ಮತದಾರರ ಪಟ್ಟಿ :
- ಪುರುಷ ಮತದಾರು : 1,03,028
- ಮಹಿಳಾ ಮತದಾರರು : 1,12,675
- ಇತರೆ : 43
- ಸೇವಾ ಮತದಾರರು : 103
- ಒಟ್ಟು ಮತದಾರರ ಸಂಖ್ಯೆ : 2,22,935
ಮದ್ದೂರು ಕ್ಷೇತ್ರದ ಮತದಾರ ಪಟ್ಟಿ :
- ಪುರುಷ ಮತದಾರು : 1,01,531
- ಮಹಿಳಾ ಮತದಾರರು : 1,04,209
- ಇತರೆ : 20
- ಸೇವಾ ಮತದಾರರು :166
- ಒಟ್ಟು ಮತದಾರರ ಸಂಖ್ಯೆ : 2,05,760
ಮಳವಳ್ಳಿ ಕ್ಷೇತ್ರದ ಮತದಾರ ಪಟ್ಟಿ :
- ಪುರುಷ ಮತದಾರರು :1,19,746
- ಮಹಿಳಾ ಮತದಾರರು : 1,17,744
- ಇತರೆ : 18
- ಸೇವಾ ಮತದಾರರು : 61
- ಒಟ್ಟು ಮತದಾರರ ಸಂಖ್ಯೆ : 2,37,508
ಮೇಲುಕೋಟೆ ಕ್ಷೇತ್ರದ ಮತದಾರರ ಪಟ್ಟಿ :
- ಪುರುಷ ಮತದಾರರು : 97,807
- ಮಹಿಳಾ ಮತದಾರರು : 97,249
- ಇತರೆ : 06
- ಸೇವಾ ಮತದಾರರು : 47
- ಒಟ್ಟು ಮತದಾರರ ಸಂಖ್ಯೆ :1,95,062
ಶ್ರೀರಂಗಪಟ್ಟಣ ಕ್ಷೇತ್ರದ ಮತದಾರರ ಪಟ್ಟಿ :
- ಪುರುಷ ಮತದಾರರು : 1,03,128
- ಮಹಿಳಾ ಮತದಾರರು : 1,04,650
- ಇತರೆ : 36
- ಸೇವಾ ಮತದಾರರು : 34
- ಒಟ್ಟು ಮತದಾರರ ಸಂಖ್ಯೆ : 2,22,935
ಕೆ.ಆರ್.ಪೇಟೆ ಕ್ಷೇತ್ರದ ಮತದಾರರ ಪಟ್ಟಿ :
- ಗಂಡು : 1,04,180
- ಹೆಣ್ಣು : 1,00,606
- ಇತರೆ: 0
- ಸೇವಾ ಮತದಾರರು:56
- ಒಟ್ಟು ಮತದಾರರ ಸಂಖ್ಯೆ:2,04,786
ನಾಗಮಂಗಲ ಕ್ಷೇತ್ರದ ಮತದಾರರ ಪಟ್ಟಿ :
- ಪುರುಷ ಮತದಾರರು : 1,04,387
- ಮಹಿಳಾ ಮತದಾರರು : 1,02,329
- ಇತರೆ: 08
- ಸೇವಾ ಮತದಾರರು:54
- ಒಟ್ಟು ಮತದಾರರ ಸಂಖ್ಯೆ:2,06,724
ಕೆ.ಆರ್ ನಗರ ಕ್ಷೇತ್ರದ ಮತದಾರರ ಪಟ್ಟಿ :
- ಪುರುಷ ಮತದಾರರು :1,01,121
- ಮಹಿಳಾ ಮತದಾರರು :1,00,052
- ಇತರೆ: 11
- ಸೇವಾ ಮತದಾರರು: 196
- ಒಟ್ಟು ಮತದಾರರ ಸಂಖ್ಯೆ:1,01,189
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಾತಿವಾರು ಪ್ರಾಬಲ್ಯ ನೋಡುವುದಾದರೆ,
- ಒಕ್ಕಲಿಗರು: 41%
- ದಲಿತರು: 14%
- ಲಿಂಗಾಯಿತ: 07%
- ಕುರುಬರು: 09%
- ವಿಶ್ವಕರ್ಮ: 05%
- ಮುಸ್ಲಿಂ: 11%
- ಕ್ರೈಸ್ತರು: 6%
- ಇತರೆ: 07%
1951 ರಿಂದ ಇಲ್ಲಿವರೆಗೂ ಚುನಾವಣೆಯಲ್ಲಿ ಗೆದ್ದವರು :
- 1951- ಶಿವನಂಜಪ್ಪ -ಕಾಂಗ್ರೆಸ್
- 1957- ಶಿವನಂಜಪ್ಪ - ಕಾಂಗ್ರೆಸ್
- 1962- ಶಿವನಂಜಪ್ಪ - ಕಾಂಗ್ರೆಸ್
- 1967- ಶಿವನಂಜಪ್ಪ - ಕಾಂಗ್ರೆಸ್
- 1971- ಎಸ್.ಎಂ.ಕೃಷ್ಣ - ಕಾಂಗ್ರೆಸ್
- 1977- ಕೆ. ಚಿಕ್ಕಲಿಂಗಯ್ಯ - ಕಾಂಗ್ರೆಸ್
- 1980- ಎಸ್.ಎಂ.ಕೃಷ್ಣ - ಕಾಂಗ್ರೆಸ್
- 1984- ಕೆ.ವಿ. ಶಂಕರೇಗೌಡ - ಜನತಾ ಪಾರ್ಟಿ
- 1989- ಜಿ. ಮಾದೇಗೌಡ - ಕಾಂಗ್ರೆಸ್
- 1991- ಜಿ. ಮಾದೇಗೌಡ - ಕಾಂಗ್ರೆಸ್
- 1996- ಕೆ.ಆರ್.ಪೇಟೆ ಕೃಷ್ಣ - ಜನತಾ ದಳ
- 1998- ಅಂಬರೀಶ್- ಜನತಾ ದಳ
- 1999- ಅಂಬರೀಶ್ - ಕಾಂಗ್ರೆಸ್
- 2004- ಅಂಬರೀಶ್ - ಕಾಂಗ್ರೆಸ್
- 2009- ಚಲುವರಾಯಸ್ವಾಮಿ - ಜೆಡಿಎಸ್
- 2013- ರಮ್ಯ -ಕಾಂಗ್ರೆಸ್ (ಉಪ ಚುನಾವಣೆ)
- 2014- ಸಿ.ಎಸ್.ಪುಟ್ಟರಾಜು - ಜೆಡಿಎಸ್
- 2018- ಎಲ್. ಆರ್. ಶಿವರಾಮೇಗೌಡ - ಜೆಡಿಎಸ್ (ಉಪಚುನಾವಣೆ)
ಕಳೆದ 3 ಚುನಾವಣೆಗಳ ಫಲಿತಾಂಶದ ಅವಲೋಕನ :
2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಟ ಅಂಬರೀಶ್ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿದ್ದ ಚಲುವರಾಯಸ್ವಾಮಿ ಗೆಲುವು ಸಾಧಿಸಿದ್ದರು. ಅಂಕಿ ಅಂಶಗಳನ್ನು ನೋಡುವುದಾದರೆ,
- ಚಲುವರಾಯಸ್ವಾಮಿ (ಜೆಡಿಎಸ್)- 3,84,443
- ಅಂಬರೀಶ್ (ಕಾಂಗ್ರೆಸ್) - 3,60,943
- ಎಲ್ ಆರ್ ಶಿವರಾಮೇಗೌಡ (ಬಿಜೆಪಿ ) - 1,44,875
ಮೇಲಿನ ಅಂಕಿ ಅಂಶ ನೋಡುವುದಾದರೆ 2009 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದು ಬಿಜೆಪಿಯ ಮತ ಗಳಿಕೆ. ಇದರ ಜೊತೆಗೆ ಕಾಂಗ್ರೆಸ್ನ 25,441 ಸಾಂಪ್ರದಾಯಿಕ ಮತಗಳು ಹೋಗಿದ್ದೂ ಕಾರಣವಾಯಿತು. ಲೋಕಸಭೆಗೆ ಆಯ್ಕೆಯಾಗಿದ್ದ ಚಲುವರಾಯಸ್ವಾಮಿ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ನಾಗಮಂಗಲ ಕ್ಷೇತ್ರದಿಂದ ಆಯ್ಕೆಯಾದರು. ನಂತರ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ರಮ್ಯ, ಜೆಡಿಎಸ್ ಅಭ್ಯರ್ಥಿ ಪುಟ್ಟರಾಜುರನ್ನು ಸೋಲಿಸಿ 10 ತಿಂಗಳ ಸಂಸದರಾಗಿ ಕಾರ್ಯ ನಿರ್ವಹಿಸಿದ್ದರು.
2014 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕೊನೆ ಕ್ಷಣದಲ್ಲಿ ಟಿಕೆಟ್ ಪಡೆದು ಕಣಕ್ಕೆ ಇಳಿದಿದ್ದ ಸಿ.ಎಸ್.ಪುಟ್ಟರಾಜು ಕಾಂಗ್ರೆಸ್ ಅಭ್ಯರ್ಥಿ ರಮ್ಯ ವಿರುದ್ಧ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಂಕಿ ಅಂಶಗಳನ್ನು ನೋಡುವುದಾದರೆ,
- ಸಿ.ಎಸ್.ಪುಟ್ಟರಾಜು (ಜೆಡಿಎಸ್) -5,24,370
- ರಮ್ಯ (ಕಾಂಗ್ರೆಸ್) - 5,18,852
- ಪ್ರೊ. ಬಿ. ಶಿವಲಿಂಗಯ್ಯ (ಬಿಜೆಪಿ) -86,993
- ಎಂ. ಕೃಷ್ಣಮೂರ್ತಿ (ಬಿಎಸ್ಪಿ) -22,391
ಮೇಲಿನ ಅಂಕಿ ಅಂಶಗಳ ಪ್ರಕಾರ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಬಿಎಸ್ಪಿಯೇ ಕಾರಣವೆಂದು ಹೇಳಲಾದರೂ ಕಾಂಗ್ರೆಸ್ ಒಳ ಜಗಳವೂ ರಮ್ಯ ಸೋಲಿಗೆ ಕಾರಣವಾಯಿತು. ಇನ್ನು ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶಿವಲಿಂಗಯ್ಯ ಪಕ್ಷದ ಅಚ್ಚರಿಯ ಅಭ್ಯರ್ಥಿಯಾಗಿದ್ದರು.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂಸದರಾಗಿದ್ದ ಸಿ.ಎಸ್. ಪುಟ್ಟರಾಜು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಎಲ್.ಆರ್. ಶಿವರಾಮೇಗೌಡ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇಲ್ಲಿ ಕಾಂಗ್ರೆಸ್ ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಮತ್ತೊಂದು ಗಮನಿಸುವ ವಿಚಾರ ಅಂದ್ರೆ ಪ್ರತಿ ಚುನಾವಣೆಯಲ್ಲೂ ಶೇ. 5 ರಿಂದ 8 ರಷ್ಟು ಮತ ಪಡೆಯುತ್ತಿದ್ದ ಬಿಜೆಪಿ ಉಪ ಚುನಾವಣೆಯಲ್ಲಿ ಶೇ. 28 ರಷ್ಟು ಮತಗಳನ್ನ ಪಡೆದು ಅಚ್ಚರಿ ಮೂಡಿಸಿತ್ತು. ಇದಕ್ಕೆ ಕಾರಣ ಕಾಂಗ್ರೆಸ್ನಲ್ಲಿನ ಅತೃಪ್ತಿ.
ಸಮಸ್ಯೆಗಳ ಚಿತ್ರಣ:
ಸಂಪೂರ್ಣ ನೀರಾವರಿಯೂ ಅಲ್ಲ, ಇತ್ತ ಒಣ ಪ್ರದೇಶವೂ ಅಲ್ಲದ ಕೃಷಿ ಪ್ರಧಾನ ಜಿಲ್ಲೆ. ಕೆ.ಆರ್. ಎಸ್, ಹೇಮಾವತಿ ನೀರಾವರಿ ಪ್ರದೇಶವನ್ನು ಹೊಂದಿರುವ ಮಂಡ್ಯ ಲೋಕಸಭಾ ಕ್ಷೇತ್ರ ಸಮರ್ಪಕ ನೀರಾವರಿ ಹೊಂದದೇ ಸಮಸ್ಯೆಗಳನ್ನು ಹೊಂದಿದೆ. ಇಡೀ ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾದ ಕ್ಷೇತ್ರ ಅನ್ನೋದು ಈ ಜಿಲ್ಲೆಯ ಕಪ್ಪು ಚುಕ್ಕೆ.
ಇನ್ನು ಕಾವೇರಿ ಅಂತಿಮ ತೀರ್ಪು ಬಂದ ನಂತರ ಶೇ. 50 ರಷ್ಟು ಮಂಡ್ಯದ ಸಮಸ್ಯೆ ಬಗೆಹರಿದಿದೆ. ಆದರೆ ಮಳೆ ಅಭಾವ ಉಂಟಾದಾಗ ನೀರಿಗಾಗಿ ಹಾಹಾಕಾರ ಏಳಲಿದೆ. ಹೀಗಾಗಿ ಕೆರೆಗಳನ್ನು ತುಂಬಿಸುವ ಕಾರ್ಯ ಚುರುಕಾಗಿ ನಡೆಯಬೇಕಾಗಿದೆ. ಕೆರೆಗಳ ಹೂಳು ಎತ್ತುವ ಕಾರ್ಯ ನಡೆಯದೇ ಇರೋದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲ್ಲಿದೆ. ಚುನಾವಣೆಯ ಮೇಲೆ ಪರಿಣಾಮವನ್ನೂ ಬೀರಬಹುದು.
ಸಕ್ಕರೆ ಕಾರ್ಖಾನೆಗಳ ಬಾಕಿ ಉಳಿಸಿಕೊಳ್ಳುವಿಕೆ, ಸಕಾಲಕ್ಕೆ ಕಬ್ಬಿನ ನುರಿಯುವಿಕೆ ಕಾರ್ಯ ನಡೆಯದಿರುವುದು ಕ್ಷೇತ್ರದ ದೊಡ್ಡ ಸಮಸ್ಯೆಯಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಮೈಶುಗರ್ ಹೊಸ ಕಾರ್ಖಾನೆಗೆ ಅನುದಾನ ಘೋಷಿಸಿದೆ. ಆದರೆ ಅದಕ್ಕೆ ಚಾಲನೆ ನೀಡುವುದು ಯಾವಾಗ ಎಂಬ ಪ್ರಶ್ನೆ ಎದ್ದಿದೆ. ಈ ಮಧ‍್ಯೆ ಪಿಎಸ್ಎಸ್ಕೆ ಪ್ರಾರಂಭವೂ ರೈತರ ಮೇಲೆ ಪರಿಣಾಮ ಬೀರಲಿದೆ. ಸಕ್ಕರೆ ಕಾರ್ಖಾನೆಗಳೇ ಜಿಲ್ಲೆಯ ಪ್ರಮುಖ ಸಮಸ್ಯೆಗಳಾಗಿವೆ. ಸಮರ್ಪಕ ಕಾಲುವೆ ನೀರಾವರಿ ಇಲ್ಲದೆ, ಸಮಸ್ಯೆ ತಲೆದೋರಿದೆ. ರಾಜಕಾಲುವೆಗಳ ಒತ್ತುವರಿ ರೈತರ ನೀರಾವರಿ ಯೋಜನೆ ಮೇಲೆ ದುಷ್ಪರಿಣಾಮ ಬೀರಿದೆ. ನೀರಾವರಿ ಸಮಸ್ಯೆಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನೀರಿನ ಸಮಸ್ಯೆಯಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಸಮಸ್ಯೆಗೆ ಸಿಲುಕಿದ್ದಾರೆ.
ಇತ್ತೀಚೆಗೆ ಎದ್ದ ದೊಡ್ಡ ಸಮಸ್ಯೆ ಎಂದರೆ ಕೆ.ಆರ್.ಎಸ್ ಗೆ ಅಪಾಯ ಎಂಬ ವರದಿ. ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆಯ ಬೋರ್ ಬ್ಲಾಸ್ಟ್ ನಿಂದ ಆಣೆಕಟ್ಟೆಗೆ ಅಪಾಯವಿದೆ ಎಂಬ ವರದಿ ರೈತರನ್ನು ನಿದ್ದೆಗೆಡಿಸಿದೆ. ಇದು ಮುಂದೆ ದೊಡ್ಡ ಸಮಸ್ಯೆ ಆಗಲಿದೆ ಎಂದು ಹೇಳಲಾಗ್ತಿದೆ.
ಕೃಷಿ ಪ್ರಧಾನ ಜಿಲ್ಲೆಯಾದ ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗದ ಸಮಸ್ಯೆ ತಲೆದೋರಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚಿನದಾಗಿ ನಡೆಯುವ ಪ್ರತಿಭಟನೆಗಳಿಂದ ದೊಡ್ಡ ದೊಡ್ಡ ಕಾರ್ಖಾನೆಗಳು ಇತ್ತ ಮುಖ ಮಾಡದೇ ಇರೋದರಿಂದ ಯುವಕರು ಮೈಸೂರು-ಬೆಂಗಳೂರಿಗೆ ಉದ್ಯೋಗಕ್ಕಾಗಿ ವಲಸೆ ಹೋಗಬೇಕಾಗಿದೆ. ಹೀಗಾಗಿ ಉದ್ಯೋಗ ನಿರ್ಮಾಣವಾಗುವಂತ ಕ್ರಾಂತಿಕಾರಿ ಕೈಗಾರಿಕೀಕರಣದ ಅವಶ್ಯಕತೆ ಇದೆ ಎಂಬ ಬೇಡಿಕೆಯೂ ಇದೆ.
ಒಟ್ಟಿನಲ್ಲಿ ಈ ಬಾರಿಯ ಲೋಕ ಸಮರದಲ್ಲಿ ಮಂಡ್ಯದ ಮತದಾರ ಪ್ರಭುಗಳು ಯಾರ ಕೈಹಿಡಿಯಲಿದ್ದಾರೆ ಎಂಬುದು ಫಲಿತಾಂಶದ ಬಳಿಕವೇ ತಿಳಿಯಲಿದೆ.