ಮಂಡ್ಯ: ಸಿಎಂ ಯಡಿಯೂರಪ್ಪ ಇಂದು ತಮ್ಮ ತವರು ಕ್ಷೇತ್ರ ಮಂಡ್ಯ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ಮಾಡಿದ್ದಾರೆ.
ಕೆ.ಆರ್. ಪೇಟೆ ಕ್ಷೇತ್ರದ ಕಿಕ್ಕೇರಿಯಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರನ್ನು ಭಾವಿ ಸಚಿವ ಎನ್ನುವುದರ ಮೂಲಕ ಭಾಷಣ ಆರಂಭ ಮಾಡಿದರು. ಭಾಷಣದುದ್ದಕ್ಕೂ ಕ್ಷೇತ್ರದ ಅಭಿವೃದ್ಧಿ ಬಗ್ಗೆಯೇ ಮಾತನಾಡಿದ ಯಡಿಯೂರಪ್ಪ ಅವರು, ನಾರಾಯಣಗೌಡರು ಸಚಿವರಾಗುತ್ತಾರೆ. ನೀವು ಕಾಮಗಾರಿಗಳ ಪಟ್ಟಿ ಮಾಡಿಕೊಂಡು ಬಂದು ಕೆಲಸ ಮಾಡಿಸಿಕೊಳ್ಳಿ ಎಂದು ಹೇಳಿದರು.
ಮೈಕ್ ಬಾಯ್ ಆದ ನಾರಾಯಣಗೌಡ:
ಸಿಎಂ ಯಡಿಯೂರಪ್ಪ ಭಾಷಣ ಆರಂಭಿಸಿದಾಗ ಕಾರ್ಯಕರ್ತರು ಸಿಎಂ ಕಾಣುತ್ತಿಲ್ಲ ಎಂದು ಕೂಗಿಕೊಂಡರು. ಆಗ ನಾರಾಯಣಗೌಡ ಮೈಕ್ ಅನ್ನು ಮತ್ತೊಂದು ಸ್ಥಳಕ್ಕೆ ಎತ್ತಿಟ್ಟರು. ಮತ್ತೆ ವಾಪಸ್ ಅದೇ ಸ್ಥಳಕ್ಕೆ ಮೈಕ್ ಸ್ಥಳಾಂತರ ಮಾಡಲಾಯಿತು.
ನಾನು ಸಿನಿಮಾ ನಟಿಯಲ್ಲ:
ಭಾಷಣದ ವೇಳೆ ಸಿಎಂ ಕಾಣುತ್ತಿಲ್ಲ. ಮಾಧ್ಯಮದವರನ್ನು ಸ್ಥಳಾಂತರಿಸಿ ಎಂದು ಅಭಿಮಾನಿಗಳು ಕೂಗಿಕೊಂಡಾಗ ನಾನು ಸಿನಿಮಾ ನಟಿಯಲ್ಲ, ಮಾಧ್ಯಮದವರು ನನ್ನನ್ನು ರಾಜ್ಯದ ಜನತೆಗೆ ತೋರಿಸುತ್ತಾರೆ ಎಂದು ಸಮಾಧಾನ ಪಡಿಸಿದರು.
ಸಿಎಂ ಸಿಟ್ಟು:
ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಅಭ್ಯರ್ಥಿ ನಾರಾಯಣಗೌಡ ಮತದಾರರಿಗೆ ಭಾಷಣವನ್ನು ನಿಲ್ಲಿಸಿ ಮತಯಾಚನೆ ಮಾಡಿದರು. ಇದಕ್ಕೂ ಮೊದಲು ಸಮಾರಂಭದಲ್ಲಿ ಕಾರ್ಯಕರ್ತರು ಹೊರ ಹೋಗುತ್ತಿರುವುದನ್ನು ಗಮನಿಸಿದ ಸಿಎಂ ಅವರು ಅಭ್ಯರ್ಥಿ ನಾರಾಯಣಗೌಡಗೆ ಕ್ಲಾಸ್ ತೆಗೆದುಕೊಂಡ ಘಟನೆಯೂ ನಡೆಯಿತು. ಸಿಎಂ ಸಿಟ್ಟಿನಿಂದ ವಿಚಲಿತರಾದ ನಾರಾಯಣಗೌಡ ಮೈಕ್ ಬಳಿ ಹೋಗಿ ಯಾರೂ ಎದ್ದು ಹೋಗದಂತೆ ಮನವಿ ಮಾಡಿದರು.