ಮಂಡ್ಯ: ಸಂವಿಧಾನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿರುವ ಸಚಿವ ಈಶ್ವರಪ್ಪ ದೆಹಲಿಯ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಆರಿಸುತ್ತೇನೆ ಎಂದು ಹೇಳಿದ ದಿನವೇ ಸಂಪುಟದಿಂದ ಕೈ ಬಿಡಬೇಕಿತ್ತು. ಕೂಡಲೇ ಅವರನ್ನು ಬಂಧಿಸಬೇಕು. ಇಲ್ಲವಾದರೆ ನಾನು ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಹೊಳಲು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜವನ್ನು ಹಾರಿಸುತ್ತೇನೆ ಎಂದರೆ ಏನು ಅರ್ಥ, ಈಶ್ವರಪ್ಪ ಸಂವಿಧಾನದ ಶಪತವನ್ನು ಮುರಿದಿದ್ದಾರೆ. ಕೂಡಲೇ ಅವರನ್ನು ಬಂಧಿಸಿ, ಮಂತ್ರಿ ಮಂಡಲದಿಂದ ಹೊರ ಹಾಕಬೇಕು. ಅವರ ಮೇಲೆ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಗುಡುಗಿದರು.
ಹಿಜಾಬ್ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿ, ತಲೆ ಮೇಲೆ ಸೆರಗು ಹಾಕ್ತೇನೆ ಅಂದ್ರೆ ಬೇಡ ಅಂತಾರೇ ಯಾವ ಸಂಸ್ಕೃತಿ ಇದು. ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾವ ತಾಯಿ ತಲೆಯ ಮೇಲೆ ಸೆರಗು ಹಾಕದೇ ಇರ್ತಾರೆ. ಪ್ರತಿಭಾ ಪಾಟೀಲ್ ಕೂಡ ಸೆರಗು ಹಾಕುತ್ತಿದ್ದರು. ಕೊರೊನಾ ಬಂದು ಪ್ರಾಣ ಹೋಗುತ್ತೆ ಎಂದಿದ್ದಾಕ್ಕೆ ಮೂಗಿಗೆ ಬಟ್ಟೆ ಕಟ್ಟಿಕೊಳ್ಲುತ್ತೀರಾ, ಅದೇ ತಲೆ ಮೇಲೆ ಸೆರಗು ಹಾಕೋದು ಬೇಡ ಎನ್ನುತ್ತಿರುವುದು ನೋಡಿದ್ರೆ ನಾಚಿಕೆ ಆಗುತ್ತೆ ಎಂದರು.
ರಾಮಮಂದಿರ, ಗೋ ಹತ್ಯೆ ಎಲ್ಲ ಮುಗಿತು, ಯಾವುದೇ ಸಮಸ್ಯೆ ಇಲ್ಲ. ಅದಕ್ಕೆ ಬಿಜೆಪಿಯವರು ಚುನಾವಣೆ ಹತ್ತಿರ ಇರುವ ಕಾರಣ ಹೊಸ ಕ್ಯಾತೆ ತೆಗೆದಿದ್ದಾರೆ. ಅಚ್ಚೆ ದಿನ್ ಆಯೇಂಗೆ ಎಂದೇಳಿ ನೂರು ರೂಪಾಯಿ ಪೆಟ್ರೋಲ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಸ್ಕಾನ್ ಧೈರ್ಯವಂತ ವಿದ್ಯಾರ್ಥಿ, ಅಷ್ಟು ಜನ ವಿದ್ಯಾರ್ಥಿಗಳ ನಡುವೆ ಎಲ್ಲರನ್ನೂ ಎದುರಿಸುವ ಧೈರ್ಯ ತೋರಿದ್ದಾಳೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಲು ನಾನು ಅವರ ಮನೆಗೆ ಭೇಟಿ ನೀಡಿದ್ದೇನೆ. ಅದರಲ್ಲಿ ತಪ್ಪೇನೂ ಇಲ್ಲ. ನನ್ನಂತೆಯೇ ಇನ್ನೂ ಹಲವಾರು ಜನ ಭೇಟಿ ನೀಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದರು.