ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದ ಮೈದಾನದಲ್ಲಿ ನಿನ್ನೆ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಮರ್ಥ್ಯ ಜೀವನೋಪಾಯ ವರ್ಷದ ಉದ್ಘಾಟನೆ ಮತ್ತು ಸಾಮರ್ಥ್ಯ ಮಳಿಗೆ ಲೋಕಾರ್ಪಣೆ ಕಾರ್ಯಕ್ರಮ ಸುಮಾರು ಎರಡು ಗಂಟೆ ತಡವಾಗಿ ಆರಂಭಗೊಂಡಿತು. ಅಷ್ಟು ಮಾತ್ರವಲ್ಲದೇ ಸಚಿವರು ಸುದೀರ್ಘ ಭಾಷಣ ಮಾಡಿದ್ದರಿಂದ ಬೇಸತ್ತ ಜನರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸುತ್ತಿದ್ದಂತೆ ಜಾಗ ಖಾಲಿ ಮಾಡಿ ತೆರಳಲಾರಂಭಿಸಿದರು. ಅದಾಗ್ಯೂ ಸಿಎಂ ಬೊಮ್ಮಾಯಿ ಜನರ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮ ನಿಗದಿತ ಸಮಯಕ್ಕಿಂತ 2 ಗಂಟೆ ತಡವಾಗಿ ಆರಂಭವಾಗಿತ್ತು. ಸಚಿವ ಅಶ್ವತ್ಥನಾರಾಯಣ ಅವರು ಸುದೀರ್ಘ ಭಾಷಣ ಮಾಡಿ ಸರ್ಕಾರದ ಯೋಜನೆಗಳು ಮತ್ತು ಮುಖ್ಯಮಂತ್ರಿಗಳನ್ನ ಗುಣಗಾನ ಮಾಡಿದರು. ಅಷ್ಟರಲ್ಲೇ ಒಂದಿಷ್ಟು ಮಂದಿ ಜಾಗ ಖಾಲಿ ಮಾಡಿದ್ದರು. ನಂತರ ಸಿಎಂ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿದ್ದಂತೆ ಉಳಿದ ಜನರೂ ತೆರಳಲಾರಂಭಿಸಿದರು.
ಇದನ್ನೂ ಓದಿ: ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಮೆಟ್ರೋ ಟಿಕೆಟ್ ದರದಲ್ಲಿ ರಿಯಾಯಿತಿ, ಪೇಪರ್ ಟಿಕೆಟ್ ಲಭ್ಯ
ಬಳಿಕ ಭಾಷಣ ಆರಂಭಿಸಿದ ಸಿಎಂ, ಜನರು ಹೊರಟಿದ್ದನ್ನು ಸಮರ್ಥಿಕೊಂಡದ್ದಲ್ಲದೇ ಆ ಕುರಿತು ಮೆಚ್ಚುಗೆ ಸಹ ವ್ಯಕ್ತಪಡಿಸಿದರು. ಮನೆಗೆಲಸ, ಹಾಲು ಕರೆಯುವ ಹೊತ್ತಾಯ್ತು ಅಂತ ತಾಯಂದಿರು ಹೊರಟಿದ್ದಾರೆ. ಬೆಳಗಿನಂದಲೂ ಕಾದು ಕೆಲಸಕ್ಕೆ ಹೊತ್ತಾದ ಕೂಡಲೇ ಹೊರಟಿದ್ದಾರೆ. ಅವರ ಸಮಯ ಪ್ರಜ್ಞೆಗೆ ಅಭಿನಂದನೆ ಎಂದು ಹೇಳುವ ಮೂಲಕ ಜನರು ಹೊರಟು ಹೋಗುತ್ತಿರುವುದಕ್ಕೆ ಸಿಎಂ ಸಮಜಾಯಿಷಿ ನೀಡಿದರು.