ಮಂಡ್ಯ: ಪ್ರಭಾವಿಗಳಿಂದ ಒತ್ತುವರಿಯಾಗಿದ್ದ ನಗರದ ಗುತ್ತಲು ಕೆರೆಯನ್ನು ತಾಲೂಕು ಆಡಳಿತ ತೆರವು ಮಾಡಿದ್ದು, ಈ ಮೂಲಕ ಒತ್ತುವರಿದಾರರಿಗೆ ಚಾಟಿ ಬೀಸಿದೆ. ಹಲವು ವರ್ಷಗಳಿಂದ ಸ್ಥಳೀಯ ಪ್ರಭಾವಿ ಮುಖಂಡರು ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿಯ ಬಗ್ಗೆ ದೂರುಗಳು ಬಂದ ಹಿನ್ನೆಲೆ, ತಹಶೀಲ್ದಾರ್ ನಾಗೇಶ್ ಅವರು ತಾವೇ ಮುಂದೆ ನಿಂತು ಒತ್ತುವರಿ ಜಾಗವನ್ನು ತೆರವುಗೊಳಿಸಿದ್ದಾರೆ.
ಗುತ್ತಲು ಸರ್ವೆ ನಂಬರ್ 396ರಲ್ಲಿ ಇರುವ ಕೆರೆಯು ಸುಮಾರು 166 ಎಕರೆಗೂ ಅಧಿಕ ವಿಸ್ತೀರ್ಣವಾಗಿತ್ತು. ಆದರೆ ಕೆಲವರು ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದರು. ಇದರಿಂದಾಗಿ ಮಳೆಗಾಲದಲ್ಲಿ ಮೇಲ್ಭಾಗದ ಜನತೆ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ಕೆಲವು ಕಡೆ ಮನೆಗಳಿಗೆ ನೀರು ನುಗ್ಗುತ್ತಿತ್ತು. ಹೀಗಾಗಿ ತಾಲೂಕು ಆಡಳಿತ ಕೆರೆ ಒತ್ತುವರಿ ತೆರವು ಮಾಡಲು ಮುಂದಾಗಿದೆ.