ಮಂಡ್ಯ: ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಹೆಚ್.ಡಿ ಚೌಡಯ್ಯ ಬಡಾವಣೆಯಲ್ಲಿ ವಾಸವಾಗಿರುವ ಪೌರ ಕಾರ್ಮಿಕರು ನಿವೇಶನ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದು, ಈ ಬಡಪಾಯಿಗಳ ಗೋಳು ಅಧಿಕಾರಿಗಳಿಗೆ ಮುಟ್ಟದಂತಾಗಿದೆ.
ಹೌದು, ಸ್ವಚ್ಚತಾ ಕಾರ್ಮಿಕರಾಗಿ ಆಗಮಿಸಿದ್ದ 16 ಕುಟುಂಬಗಳಿಗೆ ಚೌಡಯ್ಯ ಬಡಾವಣೆಯಲ್ಲಿ ನಿವೇಶನ ನೀಡಲಾಗಿತ್ತು. ಆದರೆ, ಇನ್ನೂ ಹಕ್ಕುಪತ್ರ ನೀಡಿರಲಿಲ್ಲ. ಇದನ್ನೇ ದುರುಪಯೋಗ ಪಡಿಸಿಕೊಂಡ ಕೆಲವರು ನಿವೇಶನದ ಹಕ್ಕು ಸಂಪಾದಿಸಿದ್ದಾರೆ. ಇದರಿಂದ ಮೂರು ದಶಕಗಳಿಂದ ವಾಸ ಮಾಡುತ್ತಿದ್ದ 8 ಕುಟುಂಬಗಳು ಈಗ ಜಾಗ ಖಾಲಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು 16 ಕುಟುಂಬಗಳಲ್ಲಿ 8 ಕುಟುಂಬಕ್ಕೆ ಮಾತ್ರ ಹಕ್ಕುಪತ್ರ ನೀಡಿ, ಉಳಿಕೆ ಜಾಗದ ಹಕ್ಕನ್ನು ಗ್ರಾಮದ ಕೆಲವರಿಗೆ ನೀಡಿದ್ದಾರಂತೆ. ಹೀಗಾಗಿ ಜಾಗದ ಹಕ್ಕು ಪಡೆದವರು ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರಂತೆ. ಇದರಿಂದ ವಿಚಲಿತಗೊಂಡ ಕುಟುಂಬಗಳು ಈಗ ನ್ಯಾಯಕ್ಕಾಗಿ ಅಲೆದಾಡುತ್ತಿವೆ.
ಇನ್ನಾದರೂ ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಸರ್ಕಾರ ಗುಡಿಸಲು ಮುಕ್ತ ಅನ್ನುತ್ತಿದೆ. ಆದರೆ, ಸ್ಥಳೀಯ ಆಡಳಿತ ನಿವೇಶನ ಮುಕ್ತ ಮಾಡಲು ಹೊರಟಿದ್ದು, ಇದಕ್ಕೆ ಬ್ರೇಕ್ ಹಾಕಬೇಕಾಗಿದೆ.